ಆರ್ಥಿಕ ಬಿಕ್ಕಟ್ಟಿನ ನಡುವೆ ಎಸ್‌ಬಿಐಯ ಸ್ವಯಂ ನಿವೃತ್ತಿ ಯೋಜನೆ ಕ್ರೂರವಾದುದು: ಪಿ. ಚಿದಂಬರಂ

Update: 2020-09-07 18:36 GMT

ಹೊಸದಿಲ್ಲಿ, ಸೆ. 7: ಆರ್ಥಿಕ ಬಿಕ್ಕಟ್ಟಿನ ನಡುವೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಯನ್ನು ಅನುಷ್ಠಾನಗೊಳಿಸುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದ ಚಿಂತನೆಯನ್ನು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಇದನ್ನು ಕ್ರೂರತೆ ಎಂದು ಹೇಳಿದ್ದಾರೆ.

ಆರ್ಥಿಕ ಕ್ರಮವಾಗಿ ವಿಆರ್‌ಎಸ್ ಯೋಜನೆ ಅನುಷ್ಠಾನಗೊಳಿಸಲು ಎಸ್‌ಬಿಐ ಚಿಂತಿಸುತ್ತಿದೆ ಎಂದು ಇತ್ತೀಚೆಗಿನ ವರದಿಯೊಂದು ಹೇಳಿತ್ತು. ಸಾಮಾನ್ಯ ಸಂದರ್ಭದಲ್ಲಿ ಈ ಯೋಜನೆ ಚರ್ಚೆಗೆ ಅರ್ಹವಾದುದು. ಆದರೆ, ಆರ್ಥಿಕತೆ ಕುಸಿದ ಹಾಗೂ ಉದ್ಯೋಗ ಕೊರತೆ ಇರುವ ಈ ಅಸಾಮಾನ್ಯ ಸಂದರ್ಭದಲ್ಲಿ ಇದು ಕ್ರೂರತೆ ಎಂದು ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಭಾರತದ ಅತಿ ದೊಡ್ಡ ಸಾಲದಾತವಾಗಿರುವ ಎಸ್‌ಬಿಐ ಉದ್ಯೋಗಿಗಳನ್ನು ಹೊರ ಹಾಕುವುದಾದರೆ, ಇತರ ದೊಡ್ಡ ಉದ್ಯೋಗದಾತರು ಹಾಗೂ ಎಂಎಸ್‌ಎಂಇಗಳು ಏನು ಮಾಡಬೇಕು ಎಂದು ನೀವೇ ಊಹಿಸಿ ? ಯೋಜನೆ ಸ್ವಯಂಪ್ರೇರಿತವಾಗಿದೆ. ಆದರೆ, ಬ್ಯಾಂಕ್ ಹೊರ ಹಾಕ ಬಯಸುವ ಉದ್ಯೋಗಿಗಳ ಮೇಲೆ ಸೂಕ್ಷ್ಮ ಒತ್ತಡ ಹೇರುವುದು ನಮಗೆ ತಿಳಿದಿದೆ. ಈಗಿರುವ ನಿಯಮಗಳು ನಿಜವಾದ ಸ್ವಯಂಪ್ರೇರಿತ ನಿವೃತ್ತಿಯನ್ನು ಒದಗಿಸುವುದಾದರೆ, ಹೊಸ ಯೋಜನೆ ಘೋಷಿಸುವ ಅಗತ್ಯವಾದರೂ ಏನು ? 30 ಹಾಗೂ 190ರಂತಹ ಖಚಿತ ಅಂಕೆಯನ್ನು ಯಾಕೆ ನೀಡಬೇಕು ? ಎಂದು ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.

ಮೂಲಗಳ ಪ್ರಕಾರ ಎಸ್‌ಬಿಐ ಚಿಂತಿಸಿದ ವಿಆರ್‌ಎಸ್ ಯೋಜನೆಯಲ್ಲಿ 30,000 ಉದ್ಯೋಗಿಗಳು ಅರ್ಹರಾಗಿದ್ದಾರೆ. ಹಿಂದಿನ ವರ್ಷದ 2.57 ಲಕ್ಷಕ್ಕೆ ಹೋಲಿಸಿದರೆ, 2020 ಮಾರ್ಚ್‌ಗೆ ಎಸ್‌ಬಿಐಯ ಉದ್ಯೋಗಿಗಳ ಸಾಮರ್ಥ್ಯ 2.49 ಲಕ್ಷ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News