ಕಿರಿಯ ವಕೀಲನಿಗೆ ಕೊರೋನ ಸೋಂಕು: ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸ್ವಯಂ ಕ್ವಾರಂಟೈನ್

Update: 2020-09-07 18:38 GMT

ಹೊಸದಿಲ್ಲಿ, ಸೆ. 7: ತನ್ನ ತಂಡದ ಕಿರಿಯ ವಕೀಲರೋರ್ವರು ಕೊರೋನ ಸೋಂಕಿಗೆ ಒಳಗಾದ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತನ್ನ ಕಚೇರಿಯನ್ನು ಒಂದು ವಾರಗಳ ಕಾಲ ಮುಚ್ಚಿದ್ದಾರೆ ಹಾಗೂ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ

ಆದರೆ, ಕೊರೋನದ ಯಾವುದೇ ಲಕ್ಷಣ ನನ್ನಲ್ಲಿ ಕಂಡು ಬಂದಿಲ್ಲ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

 ‘‘ಒಂದು ದಿನದ ಹಿಂದೆ ನನ್ನ ತಂಡದ ಕಿರಿಯ ವಕೀಲರೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ಅವರು ಮಾಸ್ಕ್ ಹಾಕಿಕೊಂಡು, ಸುರಕ್ಷಾ ಅಂತರ ಕಾಯ್ದುಕೊಂಡು ನನ್ನ ನಂತರ ಕುಳಿತುಕೊಳ್ಳುತ್ತಿದ್ದರು. ಆದುದರಿಂದ ನಾನು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ. ಅಲ್ಲದೆ, ನನ್ನ ಕಚೇರಿಯನ್ನು ಒಂದು ವಾರಗಳ ಕಾಲ ಮುಚ್ಚಿದ್ದೇನೆ. ನನಗೆ ಯಾವುದೇ ರೋಗ ಲಕ್ಷಣ ಇಲ್ಲ. ನಾನು ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ಕೊರೋನ ಸೋಂಕು ಪರೀಕ್ಷೆ ನಡೆಸಲು ಕೆಲವು ದಿನಗಳ ಕಾಲ ಕಾಯಲಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ಟ್ರಿಬ್ಯೂನಲ್ಸ್‌ಗಳಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ನಡೆಸುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ಕೆ.ಕೆ. ವೇಣುಗೋಪಾಲ್ ಅವರು ವಾದಿಸಬೇಕಿದೆ. ಆದರೆ, ಅವರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದು, ಈ ಬಗ್ಗೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತು.

 ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿರುವುದರಿಂದ ಪ್ರಕರಣದ ವಿಚಾರಣೆಯನ್ನು ಅಲ್ಪ ಕಾಲ ಮುಂದೂಡುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಹೇಮಂತ್ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠದ ಮುಂದೆ ಮನವಿ ಮಾಡಿದರು.

ಮನವಿಯನ್ನು ಪೀಠ ಒಪ್ಪಿಕೊಂಡಿತು ಹಾಗೂ ಪ್ರಕರಣದ ವಿಚಾರಣೆಯನ್ನು ಸೆಪ್ಟಂಬರ್ 15ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News