ಮಂಡೂರು ಘನತ್ಯಾಜ್ಯ ವಿಲೇವಾರಿ ಅಕ್ರಮ ಆರೋಪ: ನಾಲ್ಕು ಕಡೆಗಳಲ್ಲಿ ಎಸಿಬಿ ದಾಳಿ, ಮಹತ್ವದ ದಾಖಲೆಗಳ ವಶ

Update: 2020-09-08 16:21 GMT

ಬೆಂಗಳೂರು, ಸೆ.8: ಮಂಡೂರು ಘನತ್ಯಾಜ್ಯ ವಿಲೇವಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಗಾಯತ್ರಿ ರಿಸೋರ್ಸ್ ರಿಕವರಿ ಪ್ರೈವೇಟ್ ಲಿ.ನ ವ್ಯವಸ್ಥಾಪಕ ನಿರ್ದೇಶಕರ ನಿವಾಸ ಸೇರಿದಂತೆ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಮಂಗಳವಾರ ಮುಂಜಾನೆ ಇಲ್ಲಿನ ಎಸ್‍ಬಿಎಂ ಕಾಲನಿಯಲ್ಲಿ ನೆಲೆಸಿರುವ ಶ್ರೀನಿವಾಸ ಗಾಯತ್ರಿ ರಿಸೋರ್ಸ್ ರಿಕವರಿ ಪ್ರೈವೇಟ್ ಲಿ. ವ್ಯವಸ್ಥಾಪಕ ನಿರ್ದೇಶಕ ರಮೇಶ್ ನಿವಾಸ, ಇವರ ಕಚೇರಿ, ಹಾಗೂ ಬಿಬಿಎಂಪಿಯ ನಿವೃತ್ತ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಶಿವಲಿಂಗೇಗೌಡ, ಬಿಬಿಎಂಪಿ ನಿವೃತ್ತ ಸಹಾಯಕ ಅಭಿಯಂತರ ಚನ್ನಕೇಶವ ಮನೆಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಯಿತು ಎಂದು ಎಸಿಬಿ ತಿಳಿಸಿದೆ.

ಎಸಿಬಿ ದಾಳಿ ನಡೆಸಿದಾಗ ಸಂಸ್ಥೆ ಘನ ತ್ಯಾಜ್ಯದಿಂದ ವಿದ್ಯುತ್ ಘಟಕ ಸ್ಥಾಪಿಸಲು ಬಿಬಿಎಂಪಿಯಿಂದ ಮಂಜೂರಾಗಿದ್ದ ಜಮೀನು ಬ್ಯಾಂಕಿನಲ್ಲಿ ಅಡಮಾನ ಮಾಡಿ 54 ಕೋಟಿ ರೂ.ಸಾಲ ಪಡೆದಿದ್ದು, ವಂಚನೆ ಮಾಡಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಯಾವುದೇ ರೀತಿಯಲ್ಲಿಯೂ ಸಂಸ್ಕರಣೆ ಮಾಡದ ತ್ಯಾಜ್ಯಕ್ಕೂ 4.61 ಕೋಟಿ ರೂ.ಟಿಪ್ಪಿಂಗ್ ಶುಲ್ಕ ಪಾವತಿಸಿದ್ದು, ಭಾರೀ ಪ್ರಮಾಣದ ಅಕ್ರಮ ನಡೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು,

ಶಿವಲಿಂಗೇಗೌಡ - ಚೆನ್ನಕೇಶವ

ಶ್ರೀನಿವಾಸ ಗಾಯತ್ರಿ ರಿಸೋರ್ಸ್ ರಿಕವರಿ ಪ್ರೈವೇಟ್ ಲಿ. ಹಾಗೂ ಬಿಬಿಎಂಪಿ ಇಬ್ಬರು ಅಧಿಕಾರಿಗಳು ಒಳ ಒಪ್ಪಂದದಿಂದಾಗಿ ಇಡೀ ಮಂಡೂರು ವ್ಯಾಪ್ತಿಯಲ್ಲಿನ ಪ್ರದೇಶ ಸಂಪೂರ್ಣ ಹದಗೆಟ್ಟಿದ್ದು, ಇದಕ್ಕೆ ಇವರೇ ಮೂಲ ಕಾರಣ ಎನ್ನಲಾಗಿದೆ. ಈ ಸಂಬಂಧ ಎಸಿಬಿ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿಸಿದೆ.

ಏನಿದು ಪ್ರಕರಣ?: ಶ್ರೀನಿವಾಸ ಗಾಯತ್ರಿ ರಿಸೋರ್ಸ್ ರಿಕವರಿ ಪ್ರೈವೇಟ್ ಲಿ. ಬಿಬಿಎಂಪಿಯಿಂದ ಸ್ವೀಕರಿಸಿದ್ದ ಘನತ್ಯಾಜ್ಯವನ್ನು ಯಾವುದೇ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದೆ ನೇರವಾಗಿ ಲ್ಯಾಂಡ್ ಫಿಲ್‍ಗೆ ತುಂಬುತ್ತಿದ್ದು, ಈ ಅಸಮರ್ಪಕ ನಿರ್ವಹಣೆಯಿಂದ ಮಂಡೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಗ್ರಾಮಗಳಲ್ಲಿ ಪರಿಸರ ಮಾಲಿನ್ಯ ಉಂಟಾಗಿದೆ. 

ಅಲ್ಲದೆ, ಆ ಪ್ರದೇಶದಲ್ಲಿ ಅಂತರ್ಜಲವೂ ಸಂಪೂರ್ಣ ಹದಗೆಟ್ಟಿಗೆ ಎಂಬ ಅಂಶ ಬಯಲಾಗಿತ್ತು. ಇದನ್ನು ಖಂಡಿಸಿ ದೊಡ್ಡ ಮಟ್ಟದಲ್ಲಿ ಹೋರಾಟವು ನಡೆದಿತ್ತು. ಕಸಾಯಿಖಾನೆಯಿಂದ ಹೊರಬರುವ ತ್ಯಾಜ್ಯವನ್ನು ಬಿಬಿಎಂಪಿ ನೇರವಾಗಿ ಮಂಡೂರು ಘಟಕದಲ್ಲಿ ತಂದು ಸುರಿಯುತ್ತಿದ್ದ ಪರಿಣಾಮ ಸದರಿ ಘಟಕದಲ್ಲಿ ನಾಯಿ, ಹದ್ದು, ನೋಣ, ಸೊಳ್ಳೆಗಳು ಹೆಚ್ಚಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿನ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News