ಸಕಾಲದಲ್ಲಿ ಚುನಾವಣೆ ನಡೆಸುವಂತೆ ಬಿಬಿಎಂಪಿ ವಿಪಕ್ಷ ನಾಯಕರ ಪಟ್ಟು

Update: 2020-09-08 17:02 GMT

ಬೆಂಗಳೂರು, ಸೆ.8: ಪ್ರಸ್ತುತ ಸಾಲಿನಲ್ಲಿಯೇ ಬಿಬಿಎಂಪಿ ಚುನಾವಣೆ ನಡೆಯಬೇಕು. ಇದಕ್ಕಾಗಿ ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಲು ಮುಕ್ತ ಅವಕಾಶ ನೀಡಬೇಕು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕರು ಪಟ್ಟು ಹಿಡಿದರು.

ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆ ಪ್ರಾರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಶಿವರಾಜ್, ಪದ್ಮಾವತಿ ಸೇರಿದಂತೆ ಕಾಂಗ್ರೆಸ್ ಸದಸ್ಯರು, ಪ್ರತಿಭಟನೆ ನಡೆಸಿ ಸಕಾಲದಲ್ಲಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ವಿಪಕ್ಷ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ರಾಜ್ಯ ಸರಕಾರವೇ ಬಿಬಿಎಂಪಿ ಚುನಾವಣೆ ತಡೆಯುತ್ತಿದೆ. 2007ನೇ ಸಾಲಿನಲ್ಲಿ ಇದೇ ರೀತಿ ಮಾಡಲಾಯಿತು. ಇದರಿಂದ ಮೂರು ವರ್ಷಗಳ ಕಾಲ ಚುನಾವಣೆ ಇಲ್ಲದೆ, ಪಾಲಿಕೆಯ ಆಡಳಿತ ಯಂತ್ರವೇ ನಿಂತು ಹೋಗಿತ್ತು. ಆದರೆ, ಈ ಬಾರಿಯೂ ಕೊರೋನ ನೆಪವೊಡ್ಡಿ ಚುನಾವಣೆ ಮುಂದೂಡಲಾಗುತ್ತಿದೆ ಎಂದು ದೂರಿದರು.

ಈ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಪಾಲಿಕೆಗೆ ಹೆದರಿಕೆ ಇದೆ. ಹೀಗಾಗಿ, ಚುನಾವಣೆ ಬೇಕೋ, ಬೇಡವೂ ಎಂದು ತೀರ್ಮಾನ ಕೈಗೊಳ್ಳಲು ಕೌನ್ಸಿಲ್ ಸಭೆಯಲ್ಲಿ ಗುಪ್ತ ಮತದಾನಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿದರು.

ಚುನಾವಣೆ ಬಗ್ಗೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆ ನಡೆಸಿದ್ದು ಏಕೆ. ಆಗಲೇ 198 ವಾರ್ಡ್ ಗಳನ್ನು 225 ಮಾಡುವ ಚರ್ಚೆ ಏಕೆ. ಇದೀಗ ಕೋರ್ಟ್ ಛೀಮಾರಿ ಹಾಕಿದ ಬಳಿಕ ಡಿಲಿಮಿಟೇಶನ್ ಮಾಡಿದ್ದೀರಿ ಎಂದು ಸದಸ್ಯರು ದನಿ ಎತ್ತರಿಸಿದರು.

ಇದಕ್ಕೆ ಉತ್ತರಿಸಿದ ಗೌತಮ್ ಕುಮಾರ್, ಯಾರು ನಿಮಗೆ ಈ ರೀತಿ ಹೇಳಿದ್ದು, ಚುನಾವಣಾ ಅದರ ಅವಧಿಯಂತೆ ನಡೆಯಲಿದೆ. ಭಯ ಯಾರಿಗೂ ಇಲ್ಲ, ಈ ಬಗ್ಗೆ ಸುದೀರ್ಘ ಚರ್ಚೆ ಮಾಡೋಣ ಎಂದರು.

ಪಾಲಿಕೆ ಮಾಜಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಹಿಂದಕ್ಕೆ ಹೋಗಲು ಚುನಾವಣೆ ಆಯೋಗವೇ ನೇರ ಕಾರಣ ಹೊರತು ರಾಜ್ಯ ಸರಕಾರವಲ್ಲ. ಚುನಾವಣೆ ಏಕೆ ನಡೆದಿಲ್ಲ ಎನ್ನುವುದಕ್ಕೂ ನನ್ನ ಬಳಿ ದಾಖಲೆ ಇದೆ ಎಂದರು.

ಸಂತಾಪ ಸೂಚಕ ನಿರ್ಣಯ ಮಂಡನೆ

ಇತ್ತೀಚಿಗೆ ನಿಧನರಾದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಕ ನಿರ್ಣಯ ಮಂಡಿಸಲಾಯಿತು. ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಆಡಳಿತ ಪಕ್ಷದ ನಾಯಕ ಮುನಿ, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಶಿವರಾಜ್ ಸೇರಿದಂತೆ ಹಲವು ಸದಸ್ಯರು ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ನಂತರ ಒಂದು ನಿಮಿಷ ಮೌನ ಆಚರಿಸಿ, ಮೃತರ ಆತ್ಮಕ್ಕೆ ಗೌರವ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News