ನಿರ್ವಹಣೆ ಕಷ್ಟಕರ: ಕೆಲವು ಇಲಾಖೆಗಳ ವಿಲೀನಕ್ಕೆ ಸರಕಾರಕ್ಕೆ ಶಿಫಾರಸು

Update: 2020-09-08 18:05 GMT

ಬೆಂಗಳೂರು, ಸೆ.8: ಸರಕಾರಕ್ಕೆ ನಿರ್ವಹಣೆ ಮಾಡಲು ಕಷ್ಟಕರವಾಗುತ್ತಿರುವಂತಹ ಇಲಾಖೆಗಳನ್ನು ರಾಜ್ಯದ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ವೈವಿದ್ಯಮಯ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಆರನೇ ವೇತನ ಆಯೋಗ ಕೆಲ ಇಲಾಖೆಗಳ ವಿಲೀನ ಬಗ್ಗೆ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ.

ಸರಕಾರಕ್ಕೆ ಇಲಾಖೆಗಳ ನಿರ್ವಹಣೆ ಕಷ್ಟವಾಗುತ್ತಿದೆ. ಈ ನಿಟ್ಟಿನಲಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಇಲಾಖೆಗಳ ವಿಲೀನ ಮಾಡುವ ಪ್ರಕ್ರಿಯೆಗೆ ಶಿಫಾರಸು ಮಾಡಲಾಗಿದೆ. ಖಾಲಿ ಹುದ್ದೆಗಳ ಪೈಕಿ ಶೇ.50 ರಷ್ಟು ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಇದೆ. ಉಳಿದ ಹಲವು ಇಲಾಖೆಗಳಲ್ಲಿ ಮಿತಿಗಿಂತ ಹೆಚ್ಚುವರಿ ಸಿಬ್ಬಂದಿ ಇದ್ದಾರೆ.

ಕಾರ್ಯಾಚರಣೆ ವೃಂದದಲ್ಲೂ ಅನುಪಯುಕ್ತ, ಹೆಚ್ಚುವರಿ ಹುದ್ದೆಗಳಿರುವುದರಿಂದ ಆಯೋಗದ ಗಮನಕ್ಕೆ ಬಂದಿದೆ. ಪ್ರಸ್ತುತ ಕಾರ್ಯಾಚರಣೆಯ ಅಗತ್ಯ, ನವೀನ ತಾಂತ್ರಿಕತೆಗಳನ್ನು ಬಳಸುವ ಸಾಮರ್ಥ್ಯ ಮತ್ತು ಅವರ ಸೇವೆಗಿರುವ ಬೇಡಿಕೆಯನ್ನು ಗಮನಿಸಿ ಬಹುತೇಕ ಇಲಾಖೆಗಳ ಕಾರ್ಯಾಚರಣೆ ಸಿಬ್ಬಂದಿಯ ಅಗತ್ಯದ ಬಗ್ಗೆ ಸಮಗ್ರ ಪುನರ್ ಮೌಲ್ಯಮಾಪನ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ.

ಲಿಪಿಕ ಸಿಬ್ಬಂದಿ ಹೆಚ್ಚಳ: ಕಾರ್ಯಾಚರಣೆ ಸಿಬ್ಬಂದಿಗೆ ಹೋಲಿಸಿದಾಗ ಸಿಬ್ಬಂದಿ ಪ್ರಮಾಣ ಅತಿ ಹೆಚ್ಚಿದ್ದು, ದಾಖಲೆ ನಿರ್ವಹಣೆ, ಮಾಹಿತಿ ಸಂಸ್ಕರಣೆಗೆ ಇವರನ್ನು ಹೆಚ್ಚಾಗಿ ಅವಲಂಬಿಸಿರುವುದೇ ಈ ಸ್ಥಿತಿಗೆ ಕಾರಣ. ಇದನ್ನು ಬದಲಾಯಿಸಲು ರಾಜ್ಯದ ಆಡಳಿತ ವ್ಯವಸ್ಥೆಯ ಕೂಡಲೇ ಪುನರ್‍ರಚನೆ ಬಗ್ಗೆ ಗಮನ ಹರಿಸಬೇಕು. ಬಹುತೇಕ ಸಿಬ್ಬಂದಿ ಸಂಖ್ಯೆ ಕಾಯ್ದುಕೊಳ್ಳಲು ಪ್ರಯತ್ನಿಸುವಂತೆ ಆಯೋಗ ಶಿಫಾರಸು ಮಾಡಿದೆ. ರೇಷ್ಮೆ ಇಲಾಖೆಯ ಕ್ಷೇತ್ರ ಸಿಬ್ಬಂದಿಯ ಎಲ್ಲ ಖಾಲಿ ಹುದ್ದೆಗಳನ್ನು ರದ್ದುಗೊಳಿಸಲು ಆಯೋಗ ಸೂಚಿಸಿದೆ.

ವಿಲೀನಕ್ಕೆ ಶಿಫಾರಸ್ಸಾದ ಇಲಾಖೆಗಳು: ಕೆಲವು ಪ್ರಕರಣಗಳಲ್ಲಿ ಇಡೀ ಇಲಾಖೆಗಳನ್ನೇ ವಿಲೀನಗೊಳಿಸಿದರೆ ಇತರ ಪ್ರಕರಣಗಳಲ್ಲಿ ವೃಂದಗಳ ಗಣನೀಯ ಪ್ರಮಾಣದ ಹುದ್ದೆಗಳ ಮರು ಹಂಚಿಕೆ ಉತ್ತಮ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಸಹಕಾರಿ ಲೆಕ್ಕಪರಿಶೋಧನೆ ಇಲಾಖೆ, ರಾಜ್ಯ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆ ವಿಲೀನದ ಬಗ್ಗೆ ಪರಿಶೀಲಿಸಬೇಕು. ಕಾನೂನು ಮಾಪನ ಮತ್ತು ಆಹಾರ, ನಾಗರಿಕ, ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಗಳನ್ನು ವಿಲೀನಗೊಳಿಸಬಹುದು. ಸರಕಾರಿ ವಿಮಾ ಇಲಾಖೆ ಹಾಗೂ ಪಿಂಚಣಿ ಮತ್ತು ಆಸ್ತಿ ನಿರ್ವಹಣೆ ಇಲಾಖೆಗಳನ್ನು, ರಾಜ್ಯ ಗೆಜೆಟಿಯರ್ ಇಲಾಖೆ ಮತ್ತು ರಾಜ್ಯ ಪತ್ರಗಾರ ಇಲಾಖೆ, ಭಾಷಾಂತರ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಪ್ರಾಚ್ಯವಸ್ತು-ಸಂಗ್ರಹಾಲಯ ಇಲಾಖೆಗಳ ವಿಲೀನದ ಬಗ್ಗೆ ಪರಿಶೀಲಿಸಬೇಕು ಎಂದು ಆಯೋಗದ ಶಿಫಾರಸ್ಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News