ಉನ್ನಾವೊ ಮಾಜಿ ಜಿಲ್ಲಾಧಿಕಾರಿ, ಮೂವರು ಪೊಲೀಸರ ವಿರುದ್ಧ ಕ್ರಮಕ್ಕೆ ಸಿಬಿಐ ಶಿಫಾರಸ್ಸು

Update: 2020-09-09 03:54 GMT
ಕುಲದೀಪ್ ಸಿಂಗ್

ಲಕ್ನೋ : ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಲು ವಿಫಲರಾಗಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನಾವೊ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಮತ್ತು ಮೂವರು ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬಿಐ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ.

ಆಗಸ್ಟ್ ಎರಡನೇ ವಾರದಲ್ಲೇ ಸರ್ಕಾರಕ್ಕೆ ಪತ್ರ ಬರೆದಿದ್ದರೂ, ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

2017ರ ಜೂನ್‌ನಲ್ಲಿ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು, ದೂರು ನೀಡಿದ ಮಹಿಳೆ ಲಕ್ನೋದಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ ನಾಲ್ಕು ದಿನ ಬಳಿಕ ಅಂದರೆ 2018ರ ಎ. 12ರಂದು ಎಫ್‌ಐಆರ್ ದಾಖಲಿಸಿದ್ದರು. ಕಳೆದ ವರ್ಷ ದೆಹಲಿ ನ್ಯಾಯಾಲಯ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಅಂದಿನ ಜಿಲ್ಲಾಧಿಕಾರಿ ಅದಿತಿ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಪುಷ್ಪಾಂಜಲಿದೇವಿ ಮತ್ತು ನೇಹಾಪಾಂಡೆ, ಹೆಚ್ಚುವರಿ ಎಸ್ಪಿ ಅಷ್ಟಭುಜ ಪ್ರಸಾದ್ ಸಿಂಗ್ ವಿರುದ್ಧವೂ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.

ಅದಿತಿ ಸಿಂಗ್ 2009ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಹಾಪುರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುಷ್ಪಾಂಜಲಿದೇವಿ 2006ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಮಂಗಳವಾರ ಇವರನ್ನು ರೈಲ್ವೆಯ ಡಿಐಜಿ ಆಗಿ ನಿಯೋಜಿಸಲಾಗಿತ್ತು. ನೇಹಾ ಪಾಂಡೆ 2009ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಕೇಂದ್ರ ನಿಯೋಜನೆಯಲ್ಲಿ ಗುಪ್ತಚರ ಬ್ಯೂರೊದಲ್ಲಿದ್ದಾರೆ.

2017ರ ಅಕ್ಟೋಬರ್‌ನಲ್ಲಿ ಪಾಂಡೆಯವರನ್ನು ವರ್ಗಾಯಿಸಿದ ಬಳಿಕ ಪುಷ್ಪಾಂಜಲಿ ದೇವಿ ಉನ್ನಾವೊಗೆ ವರ್ಗಾವಣೆಯಾಗಿ ಬಂದಿದ್ದರು. ಅಷ್ಟಭುಜ ಪ್ರಸಾದ್ ಸಿಂಗ್ ಅವರು ಐಪಿಎಸ್ ಕೇಡರ್‌ಗೆ ಬಡ್ತಿ ಪಡೆದಿದ್ದು, ಪ್ರಸ್ತುತ ಪ್ರಾಂತೀಯ ಸಶಸ್ತ್ರ ಪಡೆಯ 12ನೇ ಬೆಟಾಲಿಯನ್ ಕಮಾಂಡೆಂಟ್ ಆಗಿ ಫತೇಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News