ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ

Update: 2020-09-09 12:47 GMT

ಬೆಂಗಳೂರು, ಸೆ.9: ರಾಜಧಾನಿಯಲ್ಲಿ ಮಂಗಳವಾರ ರಾತ್ರಿಯಿಡೀ ಗುಡುಗು, ಸಿಡಿಲು, ಭಾರಿ ಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದು, ಇದರ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಪ್ರಮುಖವಾಗಿ ನಗರದ ದಾಸರಹಳ್ಳಿ, ಹುಳಿಮಾವು, ದಿನ್ನೂರು ರಸ್ತೆ, ಬನಶಂಕರಿ, ಯಾರಬ್ ನಗರ, ಸಹಕಾರ ಹಾಗೂ ಶಾಂತಿನಗರ, ಜಯನಗರ, ಬನಶಂಕರಿ, ಮೆಜೆಸ್ಟಿಕ್, ಮಲ್ಲೇಶ್ವರಂ, ಶಿವಾಜಿನಗರ, ಹೆಬ್ಬಾಳ, ರಾಜಾಜಿನಗರ, ಕೋರಮಂಗಲ ಸೇರಿದಂತೆ ಹಲವು ಪ್ರವೇಶಗಳ ಮನೆ, ವಾಣಿಜ್ಯ ಕೇಂದ್ರಗಳಿಗೆ ನೀರು ನುಗ್ಗಿದೆ. ಕೆಳ ಸೇತುವೆಗಳು, ಪಾದಚಾರಿಗಳ ಸುರಂಗ ಮಾರ್ಗಗಳು ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ.

ಎಂಎಸ್ ಪಾಳ್ಯ, ಸಹಕಾರ ನಗರ, ಭುವನೇಶ್ವರಿ ನಗರ, ಯಲಹಂಕ ಸೇರಿದಂತೆ ಒಟ್ಟು 20ಕ್ಕೂ ಜನ ವಸತಿ ಕಟ್ಟಡಗಳಿಗೆ ನೀರು ನುಗ್ಗಿದ್ದು, ಎಂಟಕ್ಕೂ ಅಧಿಕ ಮರಗಳು ನೆಲಕ್ಕೆ ಉರುಳಿವೆ. ಅದೇ ರೀತಿ, 35ಕ್ಕೂ ಹೆಚ್ಚು ವಾಹನಗಳು ಮಳೆ ನೀರಿಗೆ ಮುಳುಗಡೆ ಆಗಿದೆ ಎಂದು ಬಿಬಿಎಂಪಿಗೆ ಅಧಿಕೃತ ದೂರುಗಳು ಬಂದಿವೆ.

ಮುಖ್ಯವಾಗಿ ಹೊರಮಾವು ಹಾಗೂ ಸಹಕಾರ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಹೊರಮಾವು ಕೆರೆಯ ಪಕ್ಕದಲ್ಲಿರುವ ಸಾಯಿ ಬಡಾವಣೆ ತುಂಬೆಲ್ಲ ನೀರು ನಿಂತ ಪರಿಣಾಮ ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೀವ್ರ ಗಾಳಿ ಮಳೆಗೆ ಅಲ್ಲಲ್ಲಿ ಮರಗಳು, ಕೊಂಬೆಗಳು ಧರೆಗುರುಳುವ ಘಟನೆಗಳು ನಡೆಯುತ್ತಿದ್ದು, ಪಾದಚಾರಿಗಳು, ವಾಹನ ಸವಾರರು ಜಾಗರೂಕತೆಯಿಂದ ಓಡಾಡುವಂತೆ, ಸಾದ್ಯವಾದಷ್ಟು ಮರಗಳಡಿಯಲ್ಲಿ ವಾಹನಗಳು ನಿಲ್ಲಿಸದಂತೆ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.

ಛಾವಣಿ ಮೇಲೆಯೇ ನಿಂತ ಜನರು

ನಗರ ವ್ಯಾಪ್ತಿಯ ರಾಜಕಾಲುವೆ ಬಳಿ ನೆಲೆಸಿರುವ ನಿವಾಸಗಳು ಮಳೆಯ ಆರ್ಭಟದಿಂದಾಗಿ ಹೆದರಿ, ಮನೆಯ ಛಾವಣಿ ಮೇಲೆಯೇ ನಿಂತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ ನಗರದಲ್ಲಿ ಈ ವಾರ ಮೋಡ ಕವಿದ ವಾತಾವರಣ ಇರಲಿದ್ದು, ಮಳೆ ಬೀಳುವ ಸಂಭವವಿದೆ. ಮಳೆ ಅನಾಹುತ ಸಮಸ್ಯೆಗಳಿಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 080-22660000 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News