ಬಂಧನಕ್ಕೆ ಬೆದರಿ ಆಸ್ಟ್ರೇಲಿಯನ್ ಪತ್ರಕರ್ತರು ಚೀನಾದಿಂದ ಪರಾರಿ

Update: 2020-09-09 16:31 GMT

ಸಿಡ್ನಿ (ಆಸ್ಟ್ರೇಲಿಯ), ಸೆ. 9: ಆಸ್ಟ್ರೇಲಿಯ ಮತ್ತು ಚೀನಾ ನಡುವಿನ ಸಂಬಂಧ ವೇಗವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಆಸ್ಟ್ರೇಲಿಯದ ಇಬ್ಬರು ಪತ್ರಕರ್ತರು ಮಂಗಳವಾರ ರಾಜತಾಂತ್ರಿಕ ರಕ್ಷಣೆಯಡಿಯಲ್ಲಿ ಚೀನಾದಿಂದ ಪರಾರಿಯಾಗಿದ್ದಾರೆ. ಚೀನಾದಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಪತ್ರಕರ್ತರ ಪರಿಸ್ಥಿತಿ ಹದಗೆಡಬಹುದು ಎಂಬುದಾಗಿ ಅಮೆರಿಕ ಎಚ್ಚರಿಕೆ ನೀಡಿರುವಂತೆಯೇ, ಈ ಬೆಳವಣಿಗೆ ನಡೆದಿದೆ.

ಚೀನಾದ ಪೊಲೀಸರಿಗೆ ಹೆದರಿ ಈ ಇಬ್ಬರು ಪತ್ರಕರ್ತರು ಚೀನಾದಲ್ಲಿರುವ ಆಸ್ಟ್ರೇಲಿಯದ ರಾಜತಾಂತ್ರಿಕ ಕಚೇರಿಗಳಲ್ಲಿ ಆಶ್ರಯ ಪಡೆದಿದ್ದರು. ಬಳಿಕ ರಾತೋರಾತ್ರಿ ಅವರು ಚೀನಾದಿಂದ ಪಲಾಯನಗೈದಿದ್ದಾರೆ.

ಬಿಲ್ ಬರ್ಟಲ್ಸ್ ಮತ್ತು ಮೈಕಲ್ ಸ್ಮಿತ್‌ಗೆ ಚೀನಾ ತೊರೆಯಲು ಅನುಮೋದನೆ ಲಭಿಸುವ ಮೊದಲು ವಿಚಾರಣೆಯನ್ನು ಎದುರಿಸಲು ಒಪ್ಪಿಗೆ ನೀಡಬೇಕಾಯಿತು. ಬಳಿಕ ತಡರಾತ್ರಿಯ ವಿಮಾನದಲ್ಲಿ ಆಸ್ಟ್ರೇಲಿಯದ ರಾಜತಾಂತ್ರಿಕರು ಅವರನ್ನು ದೇಶದಿಂದ ಹೊರಗೆ ಕಳುಹಿಸಿಕೊಟ್ಟರು.

ಅವರು ದೇಶ ತೊರೆಯುವ ಮೊದಲು, ಇನ್ನೋರ್ವ ಆಸ್ಟ್ರೇಲಿಯನ್ ಪತ್ರಕರ್ತೆ ಚೆಂಗ್ ಲೀ ಬಗ್ಗೆ ಪೊಲೀಸರು ಅವರನ್ನು ಪ್ರಶ್ನಿಸಿದರು. ಚೆಂಗ್ ಲೀಯನ್ನು ಚೀನಾ ಕಳೆದ ತಿಂಗಳು ಬಂಧಿಸಿದೆ.

ಲೀಯನ್ನು ರಾಷ್ಟ್ರೀಯ ಭದ್ರತಾ ಕಾನೂನಿನಡಿ ಬಂಧಿಸಲಾಗಿದೆ ಎಂಬುದಾಗಿ ಚೀನಾ ಮಂಗಳವಾರ ಮೊದಲ ಬಾರಿ ಒಪ್ಪಿಕೊಂಡಿದೆ. ಈ ಆರೋಪದಲ್ಲಿ ಜನರನ್ನು ಸುದೀರ್ಘ ಕಾಲ ಬಂಧನದಲ್ಲಿಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News