22 ಕೋವಿಡ್ ನಿಯಂತ್ರಕ ಉಪಕರಣಗಳನ್ನು ಬಿಡುಗಡೆ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ

Update: 2020-09-09 16:47 GMT

ಬೆಂಗಳೂರು, ಸೆ.9: ಕೊರೋನ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ವಿವಿಧ ನವೋದ್ಯಮಗಳು ಅಭಿವೃದ್ಧಿಪಡಿಸಿರುವ 22 ಕೋವಿಡ್ ನಿಯಂತ್ರಕ ಉಪಕರಣಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು.

ಬುಧವಾರ ನಗರದಲ್ಲಿ ವರ್ಚುವಲ್ ಸಮಾರಂಭದಲ್ಲಿ ಭಾಗವಹಿಸಿ ಈ ಉಪಕರಣಗಳನ್ನು ಬಿಡುಗಡೆ ಮಾಡಿದ ಡಿಸಿಎಂ ಅವರು, ಈ ಉಪಕರಣಗಳ ಅಭಿವೃದ್ಧಿಯಿಂದ ಬೆಂಗಳೂರಿನ ಮತ್ತು ಕರ್ನಾಟಕ ಅನ್ವೇಷಣಾ ಶಕ್ತಿಯು ಮತ್ತಷ್ಟು ಬಲಿಷ್ಠವಾಗಿದೆ ಎಂದು ತಿಳಿಸಿದರು.

ಈ ಉಪಕರಣಗಳಲ್ಲಿ ಆರ್‍ಟಿಪಿಸಿಆರ್ ಪರೀಕ್ಷೆಯಲ್ಲಿ ಬಳಸುವ ನ್ಯೂಕ್ಲಿಯೋಡಿಎಕ್ಸ್ ಆರ್‍ಟಿ, ವಂಶವಾಹಿನಿಗಳನ್ನು ಬಳಸಿ ಕೊರೋನ ವೈರಸ್ ಪತ್ತೆಹಚ್ಚುವ ಕೋವಿಡ್ ಎಕ್ಸ್ ಎಂಪ್ಲೆಕ್ಸ್ 3 ಆರ್ ಮತ್ತು 4ಆರ್, ದೇಹದ ಉಷ್ಣತೆಯ ಮೂಲದ ಕೊರೋನ ಸೋಂಕು ದೃಢಪಡಿಸುವ ಡಾ.ತಾಪಮಾನ್, ದೊಡ್ಡ ವಾಣಿಜ್ಯ ಸ್ಥಳಗಳಲ್ಲಿ ಬಳಸಬಹುದಾದ ಯುವಿಇಇ ಕನ್ವೇಯರ್ ಕ್ರಿಮಿನಾಶಕ ಯಂತ್ರ, ರೋಗಿಗಳ ಉಸಿರಾಟಕ್ಕೆ ನೆರವಾಗುವ ರೆಸ್ಪಿರ್ ಏಯ್ಡ್ ಯಂತ್ರ, ಜನರು 3 ರಿಂದ 5 ಮೀಟರ್ ಅಂತರದಲ್ಲಿ ಹಾದು ಹೋಗುತ್ತಿರುವಾಗಲೇ ದೇಹದ ಉಷ್ಣತೆ ಅಳೆಯಬಲ್ಲ ಪಿಕ್ಸುಯೇಟ್ ಯಂತ್ರ, ರೋಗಿಯ ದೇಹಸ್ಥಿತಿ ಮಾಪನದ ಅಂಕಿಅಂಶಗಳನ್ನು ಕೃತಕ ಬುದ್ಧಿಮತ್ತೆಯ ಮೂಲಕ ವೈದ್ಯರಿಗೆ ರವಾನಿಸಬಲ್ಲ ಡಾಕ್ಸ್‍ಪರ್ ತಂತ್ರಜ್ಞಾನಗಳು ಇವೆ. 

ಜತೆಗೆ ಮೊಬೈಲ್ ಫೋನ್ ಕ್ಯಾಮೆರಾದಿಂದ ಬೆರಳಚ್ಚಿನ ಜೈವಿಕ ಚಹರೆ ಸೆರೆ ಹಿಡಿಯಬಲ್ಲ ಟಚ್‍ಲೆಸ್ ಐಡಿ ಮತ್ತು ರೋಗಿಯ ಹಾಸಿಗೆಯ ಕೆಳಭಾಗದಲ್ಲಿ ಸೆನ್ಸಾರ್ ಹಾಳೆ ಇರಿಸಿ ಹೃದಯಬಡಿತ, ಉಸಿರಾಟ, ಆಮ್ಲಜನಕದ ಮಟ್ಟವನ್ನು ಅಳೆಯಬಲ್ಲ ಡೋಜೀ ಎಂಬ ಉಪಕರಣಗಳನ್ನೂ ಡಿಸಿಎಂ ಅವರು ಬಿಡುಗಡೆ ಮಾಡಿದರು.  

ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರು ಬಯೋ ಇನ್ನೋವೇಶನ್ ಕೇಂದ್ರದ ಮಾರ್ಗದರ್ಶದಲ್ಲಿ ವಿವಿಧ ನವೋದ್ಯಮಗಳು ಉಪಕರಣಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಲಹೆಗಾರ್ತಿ ಮತ್ತು ರಾಷ್ಟ್ರೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಆಯೋಗದ ಮುಖ್ಯಸ್ಥೆ ಡಾ.ಅನಿತಾ ಗುಪ್ತಾ, ಬಿಬಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್, ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಸಿ.ಎನ್. ಅವರು ಕಾರ್ಯಕ್ರಮದಲ್ಲಿ ಹಾಜರಿದ್ದು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News