ಬೆಂಗಳೂರು ಪೊಲೀಸರ ಭಾರೀ ಕಾರ್ಯಾಚರಣೆ: 1,350 ಕೆಜಿ ಗಾಂಜಾ ವಶ, ನಾಲ್ವರ ಬಂಧನ

Update: 2020-09-10 12:48 GMT

ಬೆಂಗಳೂರು, ಸೆ.10: ಶಾಲಾ-ಕಾಲೇಜು ಸೇರಿ ಇತರೆ ಸ್ಥಳಗಳಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 1,350 ಕೆಜಿ 300 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೆಂಗಳೂರಿನ ಗಾಯತ್ರಿನಗರದ ಆಟೋ ಚಾಲಕ ಜ್ಞಾನಶೇಖರ(37), ವಿಜಯಪುರ ಜಿಲ್ಲೆಯ ಸಿದ್ದುನಾಥ ಲಾವಟೆ(22), ಬೀದರ್ ಜಿಲ್ಲೆ ಔರಾದ್ ತಾಲೂಕಿನ ನಾಗನಾಥ್(39), ಕಲಬುರಗಿ ಜಿಲ್ಲೆ ಕಾರಟಗಿ ತಾಲೂಕಿನ ಚಂದ್ರಕಾಂತ್(34) ಎಂದು ಗುರುತಿಸಲಾಗಿದೆ.

ಈ ಎಲ್ಲ ಆರೋಪಿಗಳು ಮೇಲ್ನೋಟಕ್ಕೆ ಕುರಿ ಕಾಯುವವರಂತೆ, ಸಣ್ಣ ಪುಟ್ಟ ಕೆಲಸ ಮಾಡುವವರಂತೆ ವೇಷ ತೊಟ್ಟು ಗಾಂಜಾ ದಂಧೆ ನಡೆಸುತ್ತಿದ್ದರು. ಶಾಲಾ-ಕಾಲೇಜು ಸೇರಿ ಇತರೆ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಚಂದ್ರಕಾಂತ್ ಕುರಿ ಸಾಕಾಣಿಕೆ ಮಾಡುತ್ತಲೇ ಕೆಲ ವರ್ಷಗಳಿಂದ ಗಾಂಜಾ ದಂಧೆಯಲ್ಲಿ ತೊಡಗಿದ್ದಾನೆ. ಸಿದ್ದುನಾಥ 35 ಎಕರೆಗೂ ಹೆಚ್ಚಿನ ಜಮೀನು ಹೊಂದಿದ್ದು, ಫೈನಾನ್ಸ್ ವ್ಯವಹಾರದ ಜೊತೆಗೆ ಗಾಂಜಾ ಮಾರಾಟವನ್ನೂ ಮಾಡುತ್ತಿದ್ದ. ನಾಗನಾಥ್‍ಗೆ ಯಾವುದೇ ವ್ಯವಹಾರದಲ್ಲಿ ಲಾಭ ಸಿಗದ ಹಿನ್ನೆಲೆ ಮಾದಕ ವಸ್ತು ವ್ಯವಹಾರದತ್ತ ಮುಖ ಮಾಡಿದ್ದ ಎಂದು ತಿಳಿದುಬಂದಿದೆ.

ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಶೇಷಾದ್ರಿಪುರಂ ಠಾಣಾ ಪೊಲೀಸರು ವಿವಿಗಿರಿ ಕಾಲನಿ, ಓಂ ಶಕ್ತಿ ದೇಗುಲದ ಹಿಂಭಾಗದಲ್ಲಿ ಆಟೋ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಜ್ಞಾನಶೇಖರ ಎಂಬ ವ್ಯಕ್ತಿಯನ್ನು ಬಂಧಿಸಿ, 2 ಕೆಜಿ 100 ಗ್ರಾಂ ಗಾಂಜಾ ಮತ್ತು ಆಟೋ ಜಪ್ತಿ ಮಾಡಿದರು.

ಜ್ಞಾನಶೇಖರ್ ನಿಂದ ಹೆಚ್ಚಿನ ಮಾಹಿತಿ ಕಲೆ ಹಾಕಿದ ಪೊಲೀಸರು ಸಿದ್ದುನಾಥ ಲಾವಟೆ, ಚಂದ್ರಕಾಂತ್ ಹಾಗೂ ನಾಗನಾಥ್‍ನನ್ನು ಬಂಧಿಸಿದ್ದಾರೆ. ತನಿಖೆ ನಡೆಸುತ್ತಲೇ ಕಲಬುರಗಿ, ಬೀದರ್ ಗೆ ತೆರಳಿದ ಪೊಲೀಸರು ಸಿದ್ದುನಾಥ ಲಾವಟೆ ಬೀದರ್, ಕಲಬುರಗಿ ವ್ಯಾಪ್ತಿಯ ಕಮಲಾಪುರ ಬಳಿ ಎನ್‍ಎಚ್-50ರಲ್ಲಿ ನೆಲಮಾಳಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News