ಪಾಲಕ್ಕಾಡ್‍: ಇಬ್ಬರು ಸೋದರರಿಗೆ ಕಸ್ಟಡಿಯಲ್ಲಿ ಅಮಾನುಷ ಹಲ್ಲೆ; ಆರೋಪ

Update: 2020-09-10 12:11 GMT
ಅಬ್ದುರ್ರಹಮಾನ್, ಬಿಲಾಲ್ (Photo: twocircles.net)

ಪಾಲಕ್ಕಾಡ್: ಆರೆಸ್ಸೆಸ್ ಕಾರ್ಯಕರ್ತರೊಬ್ಬರ ಮೇಲಿನ ಹಲ್ಲೆ ಘಟನೆ ಕುರಿತಂತೆ ವಿಚಾರಣೆ ನಡೆಸಲೆಂದು ಪಾಲಕ್ಕಾಡ್‍ನ ಅಬ್ದುರ್ರಹಮಾನ್ (18) ಹಾಗೂ ಬಿಲಾಲ್ (20) ಎಂಬ ಇಬ್ಬರು ಸೋದರರನ್ನು ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ಅಲ್ಲಿ ಅವರಿಗೆ ಅಮಾನುಷ ಹಿಂಸೆ ನೀಡಿದ್ದಾರೆಂದು ಆರೋಪಿಸಲಾಗಿದೆ. "ಇಬ್ಬರಿಗೂ ಹಲ್ಲೆ ಘಟನೆಯ ಕುರಿತಂತೆ ಯಾವುದೇ ಮಾಹಿತಿಯಿರಲಿಲ್ಲ ಹಾಗೂ ತಾವು ನಿರಪರಾಧಿ ಎಂದು ಅವರು ಗೋಗರೆದಿದ್ದರೂ ಪ್ರಯೋಜನವಾಗಿಲ್ಲ,'' ಎಂದು ಅವರ ವಕೀಲ ಮುಹಮ್ಮದ್ ರಶೀದ್ ಹೇಳಿದ್ದಾರೆ ಎಂದು twocircles.net ವರದಿ ಮಾಡಿದೆ.

ಪೊಲೀಸರು ಕಸ್ಟಡಿಯಲ್ಲಿ ನೀಡಿದ್ದ ಹಿಂಸೆಯಿಂದಾಗಿ ಅಬ್ದುರ್ರಹಮಾನ್ ರ ಖಾಸಗಿ ಭಾಗಗಳು, ತೊಡೆ, ಎದೆ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.

"ಪೊಲೀಸ್ ತಂಡ ಈ ಯುವಕರ ಮನೆಯ ಕದ ತಟ್ಟಿದಾಗ ಬೇರೆ ಪುರುಷ ಸದಸ್ಯರಾರೂ ಇರಲಿಲ್ಲ. ಅವರ ಕಿರಿಯ ಸೋದರಿ ತಂದೆಗೆ ಕರೆ ಮಾಡಬೇಕೆನ್ನುವಷ್ಟರಲ್ಲಿ ಆಕೆಯನ್ನು ಬೆದರಿಸಿ ಇಬ್ಬರನ್ನೂ ಕರೆದುಕೊಂಡು ಹೋಗಿದ್ದರು. ನಂತರ ವಿಷಯ ತಿಳಿದು ಕುಟುಂಬಸ್ಥರು ಠಾಣೆಗೆ ಕರೆ ಮಾಡಿದರೂ ಯುವಕರನ್ನು ಕಸ್ಟಡಿಯಲ್ಲಿರಿಸಿರುವ ಬಗ್ಗೆ ಪೊಲೀಸರು ನಿರಾಕರಿಸಿದ್ದರು,'' ಎಂದು ವಕೀಲರು ಹೇಳುತ್ತಾರೆ.

ಪೊಲೀಸರು ಇಬ್ಬರು ಯುವಕರ ಪಾದಗಳಿಗೆ ಲಾಠಿ ಬೀಸಿ ನಂತರ ಅವರ ಎದೆಯ ಮೇಲೆ ಕುಳಿತು ಸಿಗರೇಟ್ ಲೈಟರ್‍ನಿಂದ ಅವರ ಖಾಸಗಿ ಅಂಗಗಳನ್ನು ಸುಟ್ಟು ನಂತರ ಪೆಪ್ಪರ್ ಸ್ಪ್ರೇ ಬಳಸಿದ್ದರೆಂದು, ವಕೀಲರು ಆರೋಪಿಸಿದ್ದಾರೆ. "ಇನ್ನು ಯಾವುದೇ ಮುಸ್ಲಿಮರಿಗೆ ಜನ್ಮ ನೀಡಲು ನಿಮಗೆ ಸಾಧ್ಯವಾಗುವುದಿಲ್ಲ ಎಂದು ಅವರ ಜನನಾಂಗಕ್ಕೆ ಹಾನಿಯೆಸಗುವ ಸಂದರ್ಭ ಪೊಲೀಸರು ಹೇಳಿದ್ದರು,'' ಎಂದೂ ಸೋದರರ ವಕೀಲರು ಬಹಿರಂಗ ಆರೋಪಿಸಿದ್ದಾರೆ.

ಪಾಲಕ್ಕಾಡ್‍ನ ಸೆಶನ್ಸ್ ನ್ಯಾಯಾಲಯ ಅಬ್ದುರ್ರಹಮಾನ್ ಗೆ ನಿರೀಕ್ಷಣಾ ಜಾಮೀನು ನೀಡಿದ್ದು ಆತ ಸೆಪ್ಟೆಂಬರ್ 1ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ. ಬಿಲಾಲ್‍ಗೆ ಸೆಪ್ಟೆಂಬರ್ 3ರಂದು ಜಾಮೀನು ದೊರಕಿದೆ.

ಯುವಕರ ತಾಯಿ ಹಾಜಿರಾ ಕೇರಳ ಡಿಜಿಪಿ, ರಾಜ್ಯದ ಮುಖ್ಯಮಂತ್ರಿ, ಪಾಲಕ್ಕಾಡ್ ಎಸ್‍ಪಿ, ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಅಬ್ದುರ್ರಹಮಾನ್ಗೆ ಆದ ಹಿಂಸೆಯ ಕುರಿತು ಆತನ ಸ್ನೇಹಿತರು ವೀಡಿಯೋವೊಂದನ್ನು ಮಾಡಿ ಶೇರ್ ಮಾಡಿದ್ದೇ ತಡ ನಕಲಿ ಸುದ್ದಿ ಹಬ್ಬಿಸಿ ಸಾಮರಸ್ಯ ಕೆಡಿಸಲು ಯತ್ನಿಸುತ್ತಿದ್ದಾರೆಂಬ ಆರೋಪದ ಮೇಲೆ ಪ್ರಕರಣವನ್ನೂ ದಾಖಲಿಸಲಾಗಿದೆ.

ಕಸ್ಟಡಿಯಲ್ಲಿ ನಡೆದಿದೆಯೆನ್ನಲಾದ ಅಮಾನುಷ ಹಲ್ಲೆ ಪ್ರಕರಣ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಶಿವ ವಿಕ್ರಮ್ ಅವರನ್ನು ಸಂಪರ್ಕಿಸಲು ವಾರ್ತಾ ಭಾರತಿ ನಡೆಸಿದ ಪ್ರಯತ್ನ ಸಫಲವಾಗಿಲ್ಲ. ಶಿವ ವಿಕ್ರಮ್ ರಜೆಯಲ್ಲಿದ್ದಾರೆಂದು ಹೇಳಲಾಗಿದ್ದು ಅವರಿಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ. ಪಾಲಕ್ಕಾಡ್ ಡಿವೈಎಸ್ಪಿ ಮನೋಜ್ ಕುಮಾರ್ ಅವರು ಸಂಪರ್ಕಕ್ಕೆ ಸಿಕ್ಕರೂ ಪ್ರಕರಣದ ಕುರಿತು ಮಾತನಾಡಲು ಅಥವಾ ಯಾವುದೇ ಮಾಹಿತಿಯನ್ನು ಫೋನ್ ಮೂಲಕ ನೀಡಲು ನಿರಾಕರಿಸಿದ್ದಾರೆ. ಕಚೇರಿಗೆ ಮುಖಃತ ಬಂದರೆ ಮಾತನಾಡಬಹುದು ಎಂದಷ್ಟೇ ಹೇಳಿದ್ದಾರೆ.

ಈ ಕುರಿತು ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸೊಬ್ ಪಿ ಬಿ ಅವರನ್ನು ಸಂಪರ್ಕಿಸಿದಾಗ ಪೊಲೀಸರ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ಇಬ್ಬರು ಸೋದರರ ಮೇಲೆ ಕಸ್ಟಡಿಯಲ್ಲಿ ಯಾವುದೇ ರೀತಿಯ ದೌರ್ಜನ್ಯ ನಡೆದಿಲ್ಲ ಎಂದೂ ಅವರು ಹೇಳಿದ್ದಾರೆ.

ಮನೆಯಲ್ಲಿ ಹಿರಿಯರ್ಯಾರೂ ಇಲ್ಲದ ವೇಳೆ ಏಕೆ ಅವರನ್ನು ಠಾಣೆಗೆ ಕರೆದೊಯ್ಯಲಾಯಿತು ಹಾಗೂ ಅವರ ಸೋದರಿಗೆ ಏಕೆ ಬೆದರಿಸಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು "ಇವುಗಳು ಆರೋಪಗಳು ಮಾತ್ರ, ಅವುಗಳಲ್ಲಿ ಯಾವುದೇ ಹುರುಳಿಲ್ಲ,'' ಎಂದರು.

ಒಬ್ಬ ಸಂತ್ರಸ್ತ ಯುವಕ ಒಂದು ವಾರಕ್ಕೂ ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕುರಿತು ಅವರನ್ನು ಪ್ರಶ್ನಿಸಿದಾಗ ಈ ವಿಚಾರವನ್ನು ಪರಿಶೀಲಿಸಲಾಗುವುದು ಹಾಗೂ ವರದಿ ಸಲ್ಲಿಕೆಯ ನಂತರ ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News