ಡ್ರಗ್ಸ್ ದಂಧೆಯಲ್ಲಿ ಎಷ್ಟೇ ದೊಡ್ಡವರಿದ್ದರೂ ಬಿಡುವುದಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Update: 2020-09-10 12:09 GMT

ಬೆಂಗಳೂರು, ಸೆ. 10: ಡ್ರಗ್ಸ್ ದಂಧೆಯಲ್ಲಿ ಯಾರೇ ಭಾಗಿಯಾಗಿರುವವರೂ, ಅವರ ಎಷ್ಟೇ ಪ್ರಭಾವಿಗಳು ಅಥವಾ ದೊಡ್ಡವರಿರಲಿ ಅವರ ವಿಚಾರಣೆ ಮಾಡಿಯೇ ಮಾಡುತ್ತೇವೆ. ಯಾರೊಬ್ಬರನ್ನು ಬಿಡುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾದಕ ವಸ್ತು (ಡ್ರಗ್ಸ್) ಜಾಲದ ಬಗ್ಗೆ ಸಿಸಿಬಿ ಪೊಲೀಸರು ಬಹಳ ವೃತ್ತಿನಿರತರಾಗಿ ಅತ್ಯಂತ ಕ್ರಮ ಬದ್ಧವಾಗಿ ತನಿಖೆ ಕೈಗೊಂಡಿದ್ದಾರೆ. ತನಿಖೆಯ ಜಾಡು ಹಿಡಿದು ಎಷ್ಟೇ ದೊಡ್ಡವರಿರಲಿ ಅವರ ವಿಚಾರಣೆ ಮಾಡುವುದು ಶತಸಿದ್ಧ. ದಂಧೆಯಲ್ಲಿರುವವರು ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪೊಲೀಸರ ವಿಚಾರಣೆ ಸ್ಕೃಟಿನಿ ಆಫ್ ದಿ ಕೋರ್ಟ್ ಆಗುತ್ತದೆ. ಕಾನೂನಿನ ಅನ್ವಯವೇ ಕಾರ್ಯಾಚರಣೆಗಳು ನಡೆದಿವೆ. ಈ ಮಾದಕ ವಸ್ತುಗಳ ಜಾಲಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಆಧಾರದ ಮೇಲೆಯೇ ಕ್ರಮಬದ್ಧವಾಗಿ ತನಿಖೆ ನಡೆಯುತ್ತಿದೆ. ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಿ ಎಂಬ ಕಾನೂನು ಒತ್ತಾಯವೂ ತಜ್ಞರಿಂದ ಬರುತ್ತಿದೆ. ಹೀಗಾಗಿ ಮಾದಕ ವಸ್ತು ಜಾಲ ನಿಯಂತ್ರಿಸುವ ಸಂಬಂಧ ಬಿಗಿ ಕ್ರಮಗಳನ್ನು ಕೈಗೊಳ್ಳಲು ಜಾರಿಯಲ್ಲಿರುವ ಕಾನೂನನ್ನು ಮತ್ತಷ್ಟು ಬಲಗೊಳಿಸಲು ಕಾನೂನು ತಜ್ಞರ ಜತೆ ಚರ್ಚೆ ನಡೆಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯದಲ್ಲಿನ ಮಾದಕ ವಸ್ತು ಜಾಲವನ್ನು ಮಟ್ಟ ಹಾಕಲು ಕಾನೂನನ್ನು ಬಿಗಿಗೊಳಿಸುವ ಸಂಬಂಧ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಜತೆಯೂ ಚರ್ಚೆ ಮಾಡುತ್ತೇನೆ. ಜತೆಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಸಲಹಾ ಮುಖ್ಯಸ್ಥರ ಜತೆಯೂ ಚರ್ಚಿಸುತ್ತೇನೆ. ಮುಖ್ಯಸ್ಥರು ಪ್ರೊಫೆಸರ್ ಗಳ ಜತೆಯೂ ಚರ್ಚೆ ಮಾಡಿ ಕಾನೂನನ್ನು ಬಿಗಿಗೊಳಿಸುವ ಸಂಬಂಧ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮಾದಕ(ಡ್ರಗ್ಸ್) ವಸ್ತುಗಳ ಈ ಜಾಲ ನಿನ್ನೆ ಮೊನ್ನೆಯದಲ್ಲ. ಬಹಳ ವರ್ಷಗಳ ಹಿಂದೆಯೂ ಇತ್ತು. ಹೀಗಾಗಿ ಕೂಲಂಕಷ ತನಿಖೆ ನಡೆದಿದೆ. ಸಿಸಿಬಿ ಪೊಲೀಸರು ಅತ್ಯಂತ ಕ್ರಮಬದ್ಧವಾಗಿ ಅತ್ಯಂತ ವೃತ್ತಿನಿರತವಾಗಿ ತನಿಖೆ ನಡೆಸಿದ್ದಾರೆ. ತಪ್ಪಿತಸ್ಥರ ಹೆಡೆಮುರಿ ಕಟ್ಟಲಿದ್ದು, ಕಾನೂನಿನ ಅನ್ವಯ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಲು ಸರಕಾರ ನಿಶ್ಚಿತವಾಗಿ ಕ್ರಮ ವಹಿಸಲಿದೆ

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News