ಕೆಂಪೇಗೌಡ ಪ್ರಶಸ್ತಿ ಪಟ್ಟಿಯಿಂದ ಮರ್ಸಿ ಏಂಜೆಲ್ಸ್‌ ನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟ ಬಿಬಿಎಂಪಿ

Update: 2020-09-11 06:56 GMT

ಬೆಂಗಳೂರು, ಸೆ. 11: ಕೋವಿಡ್ 19ನಿಂದ ಮೃತಪಟ್ಟವರನ್ನು ಗೌರವಪೂರ್ವಕ ಅಂತ್ಯಸಂಸ್ಕಾರಕ್ಕೆ ಪ್ರಯತ್ನಿಸುತ್ತಿರುವ ಮರ್ಸಿ ಏಂಜೆಲ್ಸ್‌ನ ಡಾ.ತಾಹಾ ಮತೀನ್‌ರವರ ಸೇವೆಯನ್ನು ಗುರುತಿಸಿ ಘೋಷಿಸಲಾಗಿದ್ದ ಕೆಂಪೇಗೌಡ ಪ್ರಶಸ್ತಿಯನ್ನು ನೀಡದ ಬಿಬಿಎಂಪಿ ವಿವಾದಕ್ಕೆ ಸಿಲುಕಿದೆ. ಬಿಬಿಎಂಪಿ ಡಾ. ಮತೀನ್ ಅವರ ಹೆಸರನ್ನು ಕೊನೆಯ ಕ್ಷಣದಲ್ಲಿ ಪ್ರಶಸ್ತಿ ಪಟ್ಟಿಯಿಂದ ಕೈಬಿಟ್ಟು ಎಡವಟ್ಟು ಮಾಡಿದೆ.

ಕೋವಿಡ್-19ನಿಂದ ಮೃತಪಟ್ಟ ವ್ಯಕ್ತಿಗೆ ಅವರ ಕುಟುಂಬ ವರ್ಗದವರು ಅಂತ್ಯಸಂಸ್ಕಾರಕ್ಕೆ ಮುಂದಾಗದೆ ಇದ್ದ ಸಂದರ್ಭದಲ್ಲಿ ಮರ್ಸಿ ಏಂಜೆಲ್ಸ್ ಸ್ವಯಂ ಸೇವಕರು ಅವರ ಅಂತ್ಯಸಂಸ್ಕಾರವನ್ನು ಗೌರವಪೂರ್ವಕವಾಗಿ ನೆರವೇರಿಸುತ್ತಿದ್ದಾರೆ.

ಬಿಬಿಎಂಪಿ ಡಾ. ಮತೀನ್ ಸಹಿತ 33 ಸಾಧಕರಿಗೆ ಪ್ರಶಸ್ತಿ ಘೋಷಿಸಿತ್ತು. ಗುರುವಾರ ಬೆಳಿಗ್ಗೆ ಮಾಧ್ಯಮಕ್ಕೆ ಬಿಡುಗಡೆಯಾದ ಪಟ್ಟಿಯಲ್ಲಿ ಡಾ. ಮತೀನ್ ಹೆಸರಿತ್ತು. ಸಂಜೆ ವೇಳೆಗೆ ಅವರ ಹೆಸರು ಕಾಣೆಯಾಗಿದೆ. ಬಿಬಿಎಂಪಿ ವಿಪಕ್ಷನಾಯಕ ಅಬ್ದುಲ್ ವಜೀದ್ ಈ ವಿಚಾರವನ್ನು ಎತ್ತುವ ಮೂಲಕ ಮಹಾನಗರ ಪಾಲಿಕೆಯ ಎಡವಟ್ಟು ಬೆಳಕಿಗೆ ಬಂದಿದೆ. ಆರೆಸ್ಸೆಸ್ ಆಣತಿ ಮೇರೆಗೆ ಮೇಯರ್ ಗೌತಮ್ ಕುಮಾರ್‌ರವರು ಡಾ. ಮತೀನ್ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ವಜೀದ್ ಆರೋಪಿಸಿದ್ದಾರೆ.

"ನಾನು ಸಹಿ ಮಾಡಿರುವ ಪ್ರಶಸ್ತಿ ವಿಜೇತರುಗಳ ಪಟ್ಟಿಯಲ್ಲಿ ಮರ್ಸಿ ಏಂಜೆಲ್ಸ್ ನ ಡಾ.ತಾಹಾ ಮತೀನ್‌ರ ಹೆಸರು ಇರಲಿಲ್ಲ. ಕೆಂಪೇಗೌಡ ಪ್ರಶಸ್ತಿಯನ್ನು ಸರಕಾರೇತರ ಸಂಸ್ಥೆಗಳಿಗೆ ನೀಡುವುದಿಲ್ಲ'' ಎಂದು ಮೇಯರ್ ಗೌತಮ್ ಕುಮಾರ್ ಪ್ರತಿಕ್ರಿಯಿಸಿದರು.

ಡಾ. ತಾಹಾ ಮತೀನ್‌ರವರು ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವೈದ್ಯರ ಕೊರತೆಯ ನಡುವೆಯೂ ಸೋಂಕಿತರ ಚಿಕಿತ್ಸೆಯನ್ನು ಮುಂದುವರಿಸಿದ್ದರು ಹಾಗೂ ವೈದ್ಯರು ಮನೆಯಲ್ಲಿ ಕುಳಿತುಕೊಳ್ಳದೇ ಸೋಂಕಿತರ ಚಿಕಿತ್ಸೆಗೆ ಮುಂದೆ ಬರಬೇಕು ಎಂದು ಅವರು ಹೇಳಿದ್ದ ವೀಡಿಯೋವೊಂದು ವೈರಲ್ ‌ಆಗಿತ್ತು.

ಆರೆಸ್ಸೆಸ್ ನೊಂದಿಗೆ ಸಂಪರ್ಕ ಇರುವ ವ್ಯಕ್ತಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ "ಆರ್‌ಎಸ್‌ಎಸ್‌ನವರಿಗೆ ಪ್ರಶಸ್ತಿ ನೀಡಬೇಕೆಂಬ ಯಾವುದೇ ನಿಯಮವಿಲ್ಲ. ಸಮಾಜ ಕಲ್ಯಾಣಕ್ಕೆ ಕೊಡುಗೆ ನೀಡಿದ ಸಾಧಕರನ್ನು ಗೌರವಿಸಬೇಕು. ಅದನ್ನು ನಾವು ಮಾಡಿದ್ದೇವೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News