ವಕ್ಫ್ ಬೋರ್ಡ್ ನಿಂದ ಬಡ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು: ಡಾ.ನಾಸೀರ್ ಹುಸೇನ್

Update: 2020-09-12 17:32 GMT

ಬೆಂಗಳೂರು, ಸೆ.12: ಮುಸ್ಲಿಮ್ ಸಮುದಾಯದಲ್ಲಿರುವ ಬಡ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಉರ್ದು ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಂಬಂಧ ವಕ್ಫ್ ಬೋರ್ಡ್ ನಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಾಸೀರ್ ಹುಸೇನ್ ತಿಳಿಸಿದರು.

ಶನಿವಾರ ಆರ್.ಟಿ.ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮ್ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ. ಆದುದರಿಂದ, ವಕ್ಫ್ ಬೋರ್ಡ್ ನಲ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಒಂದು ಆವರ್ತ ನಿಧಿಯನ್ನು ಸ್ಥಾಪಿಸಿ, ಅದರಿಂದ ಶಿಕ್ಷಣಕ್ಕೆ ನೆರವು ಒದಗಿಸಲು ನಿರ್ಧರಿಸಲಾಗಿದೆ ಎಂದರು.

ಆರ್ಥಿಕವಾಗಿ ಪ್ರಬಲವಾಗಿರುವ ವಕ್ಫ್ ಸಂಸ್ಥೆಗಳು ಉರ್ದು ಶಾಲೆಗಳನ್ನು ದತ್ತು ತೆಗೆದುಕೊಂಡು ಅಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಸಂಬಂಧ ಚಿಂತನೆ ನಡೆಸಲಾಗಿದೆ. ಮುಸ್ಲಿಮ್ ಸಮುದಾಯದಲ್ಲಿ ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳ ಪ್ರಮಾಣ ಹೆಚ್ಚುತ್ತಿರುವುದರಿಂದ, ವಕ್ಫ್ ಬೋರ್ಡ್ ಈ ನಿಟ್ಟಿನಲ್ಲಿ ಆಲೋಚನೆ ಮಾಡಿದೆ ಎಂದು ಅವರು ಹೇಳಿದರು.

ನೂತನ ವಕ್ಫ್ ಬೋರ್ಡ್ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ತನ್ನ ಕೊಡುಗೆ ನೀಡಲು ಸಿದ್ಧವಾಗಿದೆ. ಆದುದರಿಂದ, ವಕ್ಫ್ ಬೋರ್ಡ್ ಗೆ ಸೇರಿರುವ ಆಸ್ತಿಗಳನ್ನು ಸದ್ಬಳಕೆ ಮಾಡಿಕೊಂಡು, ಅದರಿಂದ ಆರ್ಥಿಕ ಸಂಪನ್ಮೂಲವನ್ನು ವೃದ್ಧಿಸಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ನಾಸೀರ್ ಹುಸೇನ್ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ವಕ್ಫ್ ಆಸ್ತಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೆ ಸರಕಾರದಿಂದ 119 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ಸಿಕ್ಕಿದೆ. ಇನ್ನು 28 ಕೋಟಿ ರೂ.ಗಳ ಅನುದಾನ ಲಭ್ಯವಾಗಲಿದೆ. ಈ ಅನುದಾನವನ್ನು ಹಾಸ್ಟೆಲ್, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಬಳಕೆ ಮಾಡಲಾಗುವುದು ಎಂದು ಅವರು ಹೇಳಿದರು.

ರಾಜೀವ್ ಗಾಂಧಿ ಆವಾಸ್ ಯೋಜನೆ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳನ್ನು ತೆರವು ಮಾಡಿ ಬಡ ಮುಸ್ಲಿಮರಿಗೆ ಬಹುಮಹಡಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಕುರಿತು ಚರ್ಚೆ ನಡೆಯುತ್ತಿದೆ ಎಂದು ನಾಸೀರ್ ಹುಸೇನ್ ತಿಳಿಸಿದರು.

ವಕ್ಫ್ ಆಸ್ತಿಗಳ ದುರ್ಬಳಕೆ ತಡೆಯುವ ಉದ್ದೇಶದಿಂದ ರಾಜ್ಯದಲ್ಲಿರುವ ಸುಮಾರು 33 ಸಾವಿರ ವಕ್ಫ್ ಸಂಸ್ಥೆಗಳ 45 ಸಾವಿರಕ್ಕೂ ಹೆಚ್ಚು ಆಸ್ತಿಗಳ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದಾಗಿ, ವಕ್ಫ್ ಆಸ್ತಿಗಳ ಒತ್ತುವರಿಯನ್ನು ತಡೆಯಬಹುದಾಗಿದೆ ಎಂದು ಅವರು ಹೇಳಿದರು.

ವಕ್ಫ್ ಬೋರ್ಡ್‍ನ ಹೆಚ್ಚಿನ ಸಮಯ ಆಡಳಿತ ಸಮಿತಿಗಳ ನಡುವಿನ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವುದರಲ್ಲಿ ಕಳೆದು ಹೋಗುತ್ತಿದೆ. ಆದುದರಿಂದ, ಜಿಲ್ಲಾ ಮಟ್ಟದ ವಕ್ಫ್ ಅಧಿಕಾರಿಗಳಿಗೆ ವಕ್ಫ್ ಸಂಸ್ಥೆಗಳ ಆಡಳಿತ ಸಮಿತಿಗಳ ರಚನೆ, ವ್ಯಾಜ್ಯಗಳ ಇತ್ಯರ್ಥ ಮಾಡುವ ಅಧಿಕಾರವನ್ನು ನೀಡಲಾಗಿದೆ. ಹೆಚ್ಚು ಗಂಭೀರ ಸ್ವರೂಪದ ಪ್ರಕರಣಗಳಿದ್ದಲ್ಲಿ ರಾಜ್ಯ ಸಮಿತಿ ಅದನ್ನು ಸರಿಪಡಿಸುವ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News