ಕನಿಷ್ಠ ವೇತನವಿಲ್ಲದೆ ಸಾರ್ವಜನಿಕ ಗ್ರಂಥಾಲಯಗಳ ಶುಚಿಗಾರರ ಪರದಾಟ: ಆರೋಪ

Update: 2020-09-12 17:12 GMT

ಬೆಂಗಳೂರು, ಸೆ.12: ರಾಜಧಾನಿಯಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕೆಲಸ ಮಾಡುತ್ತಿರುವ ಶುಚಿಗಾರರು ಹತ್ತಾರು ವರ್ಷಗಳಿಂದ ಕನಿಷ್ಠ ವೇತನವಿಲ್ಲದೆ ಪರದಾಡುವಂತಾಗಿದೆ. ಆದರೂ, ಸರಕಾರ ಇವರ ಕಡೆ ಕಣ್ಣೆತ್ತಿ ನೋಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ನೂರಾರು ಶುಚಿಗಾರರು ಕನಿಷ್ಠ ವೇತನದ ಕನಸು ಕಾಣುತ್ತಲೇ ನಿವೃತ್ತಿಯಾಗಿದ್ದು, ಮತ್ತಷ್ಟು ಜನರು ನಿವೃತ್ತಿಯಾಗುವ ಅಂತಿಮ ಘಟ್ಟದಲ್ಲಿದ್ದಾರೆ. ಆದರೆ, ಇವರ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತುವವರಿಲ್ಲ.

ನಗರದಲ್ಲಿರುವ ಐದು ವಲಯಗಳಲ್ಲಿನ ಗ್ರಂಥಾಲಯಗಳಲ್ಲಿ 350 ಕ್ಕೂ ಅಧಿಕ ಶುಚಿಗಾರರಿದ್ದಾರೆ. ಗ್ರಂಥಾಲಯ ಆರಂಭವಾದಾಗಿಂದ ಇಂದಿನವರೆಗೂ 250 ರಿಂದ 6500 ವರೆಗೆ ಸಂಬಳ ಪಡೆಯುತ್ತಿದ್ದಾರೆ. ಕೈ ಬರಹದಲ್ಲಿರುವ ಒಪ್ಪಂದ ಪತ್ರವನ್ನು ಹೊರತುಪಡಿಸಿದರೆ ಇವರ ಬಳಿ ಅಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಬೇರೆ ಯಾವುದೇ ದಾಖಲಾತಿಗಳೂ ಇಲ್ಲ. ಗೌರವಧನವನ್ನು ನಗದು ರೂಪದಲ್ಲಿ ನೀಡಲಾಗುತ್ತಿದ್ದು, ಅದು ಕೂಡ ತಿಂಗಳ ಮೊದಲ ವಾರದಲ್ಲಿ ಕೈಸೇರುತ್ತಿಲ್ಲ ಎಂದು ಶುಚಿಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಇಲಾಖೆ ಹಾಗೂ ಸರಕಾರಕ್ಕೆ ಹಲವು ಭಾರಿ ಶುಚಿಗಾರರಿಗೆ ಕನಿಷ್ಠ ವೇತನ ನೀಡಿ ಹಾಗೂ ಉದ್ಯೋಗ ಭದ್ರತೆ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದ್ದರೂ, ಅದು ಯಾವುದೇ ಪ್ರಯೋಜನವಾಗಿಲ್ಲ. ಗ್ರಂಥಾಲಯಗಳನ್ನು ಸ್ವಚ್ಛಪಡಿಸುವ ಜತೆಗೆ ಪುಸ್ತಕಗಳನ್ನು ಜೋಡಿಸುವುದು, ಸಂಖ್ಯೆ ದಾಖಲಿಸುವುದು, ಮುದ್ರೆ ಹಾಕುವುದು, ಪುಸ್ತಕಗಳ ವಿತರಣೆ ಸೇರಿದಂತೆ ಹಲವು ಕೆಲಸಗಳನ್ನು ಅವರು ಮಾಡುತ್ತಿದ್ದಾರೆ.

''20 ವರ್ಷಗಳಿಂದ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಒಪ್ಪಂದದ ಪ್ರಕಾರ ಎರಡು ಗಂಟೆ ಕೆಲಸ ಮಾಡಬೇಕಾದರೂ 8 ಗಂಟೆಗಳು ದುಡಿಸಿಕೊಳ್ಳಲಾಗುತ್ತಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಯಾವುದೇ ಸೌಲಭ್ಯಗಳನ್ನು ನಮಗೆ ನೀಡುತ್ತಿಲ್ಲ. ನಮ್ಮ ಕೆಲಸವನ್ನು ಗುರುತಿಸಿ, ಕನಿಷ್ಠ ವೇತನವನ್ನು ನೀಗದಿಪಡಿಸಬಹುದು ಎಂಬ ಭರವಸೆಯಲ್ಲಿದ್ದೆವು. ಆದರೆ, ನಮ್ಮ ಸಮಸ್ಯೆಗಳಿಗೆ ಸ್ಪಂದನೆ ದೊರೆಯಲಿಲ್ಲ'' ಎಂದು ಶುಚಿಗಾರರೊಬ್ಬರು ಹೇಳಿದ್ದಾರೆ.

ಜೀವನ ನಿರ್ವಹಣೆ ಕಷ್ಟ

‘1994ರಿಂದ ಇದೇ ಕೆಲಸ ಮಾಡುತ್ತಿದ್ದೇನೆ. ಆರಂಭದಲ್ಲಿ ತಿಂಗಳಿಗೆ 300 ಗೌರವಧನ ನೀಡಲಾಗುತ್ತಿತ್ತು. ಈಗ 6,500 ಗೌರವಧನ ಸಿಗುತ್ತಿದೆ. ನಮ್ಮ ಬಗ್ಗೆ ಯಾರೂ ಅನುಕಂಪ ತೋರಿಸುತ್ತಿಲ್ಲ. ಜೀವನ ನಿರ್ವಹಣೆಯೂ ಕಷ್ಟವಾಗಿದೆ ಎಂದು ಶುಚಿಗಾರರಾಗಿರುವ ಮಹಿಳೆಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗ್ರಂಥಾಲಯಗಳಲ್ಲಿ ದುಡಿಯುವ ಶುಚಿಗಾರರಿಗೆ ಕನಿಷ್ಠ ವೇತನವಿಲ್ಲದಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಗ್ರಂಥಾಲಯ ಇಲಾಖೆಯಿಂದ ಶೀಘ್ರದಲ್ಲಿಯೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ.

–ಡಾ. ಸತೀಶ ಕುಮಾರ್ ಎಸ್. ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News