​ದೆಹಲಿ ಗಲಭೆ ಆರೋಪ ಪಟ್ಟಿಯಲ್ಲಿ ಯೆಚೂರಿ, ಯೋಗೀಂದ್ರ ಯಾದವ್ ಹೆಸರಿಲ್ಲ: ಪೊಲೀಸ್ ಇಲಾಖೆ ಸ್ಪಷ್ಟನೆ

Update: 2020-09-13 04:14 GMT
ಫೈಲ್ ಫೋಟೊ

ಹೊಸದಿಲ್ಲಿ : ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಲ್ಲಿಸಿದ ಪೂರಕ ಆರೋಪಪಟ್ಟಿಯಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸ್ವರಾಜ್ ಅಭಿವನ್ ಮುಖಂಡ ಯೋಗೀಂದ್ರ ಯಾದವ್, ಅರ್ಥಶಾಸ್ತ್ರಜ್ಞ ಜಯತಿ ಘೋಷ್, ದೆಹಲಿ ವಿವಿ ಪ್ರೊಫೆಸರ್ ಮತ್ತು ಸಾಮಾಜಿಕ ಕಾರ್ಯಕರ್ತ ಅಪೂರ್ವಾನಂದ ಹಾಗೂ ಚಿತ್ರ ನಿರ್ಮಾಪಕ ರಾಹುಲ್ ರಾಯ್ ಅವರ ಹೆಸರು ಸೇರಿದೆ ಎಂಬ ಮಾಧ್ಯಮ ವರದಿಗಳನ್ನು ದೆಹಲಿ ಪೊಲೀಸ್ ಇಲಾಖೆ ಅಲ್ಲಗಳೆದಿದೆ.

ಮೇಲೆ ಹೆಸರಿಸಿದ ಮುಖಂಡರನ್ನು ಸಹ ಸಂಚುದಾರರಾಗಿ ಪೂರಕ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ ಎಂಬ ವರದಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಈ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಯೆಚೂರಿ, "ಇದು ಅಕ್ರಮ ಮತ್ತು ಕಾನೂನುಬಾಹಿರ. ಬಿಜೆಪಿಯ ಉನ್ನತ ನಾಯಕರು ನಡೆಸಿದ ರಾಜಕೀಯದ ನೇರ ಪರಿಣಾಮ" ಎಂದು ವಾಗ್ದಾಳಿ ನಡೆಸಿದ್ದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಪಿಟಿಐ ಟ್ವೀಟ್ ಉಲ್ಲೇಖಿಸಿದ ದೆಹಲಿ ಪೊಲೀಸ್ ವಕ್ತಾರರು, "ಜಾಫರಾಬಾದ್ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ...ಸಿಎಎ ವಿರೋಧಿ ಹೋರಾಟ ಆಯೋಜಿಸಿದ ಮತ್ತು ಭಾಷಣ ಮಾಡಿದ ಸಂಬಂಧ ಆರೋಪಿಯೊಬ್ಬ ನೀಡಿದ ಹೇಳಿಕೆಯಲ್ಲಿ ಈ ಹೆಸರುಗಳು ಸೇರಿವೆ ಎಂದು ಒಂದು ಆನ್‌ಲೈನ್ ಸುದ್ದಿಸಂಸ್ಥೆಯಲ್ಲಿ ವರದಿಯಾಗಿದೆ" ಎಂದು ವಿವರಿಸಿದ್ದರು.

"ಆರೋಪಿ ನೀಡಿದ ಹೇಳೀಕೆಯನ್ನು ಸತ್ಯವಾಗಿ ಆರೋಪಿ ವಿವರಿಸಿದಂತೆ ದಾಖಲಿಸಲಾಗಿದೆ. ಆದರೆ ಈ ಹೇಳಿಕೆ ಆಧಾರದಲ್ಲಿ ಒಬ್ಬನನ್ನು ಆರೋಪಿಯನ್ನಾಗಿ ಹೆಸರಿಸಲು ಸಾಧ್ಯವಿಲ್ಲ. ಕಾನೂನು ಕ್ರಮ ಕೈಗೊಳ್ಳಲು ಮತ್ತಷ್ಟು ಪೂರಕ ಸಾಕ್ಷಿಗಳು ಬೇಕು. ಈ ವಿಚಾರ ಸದ್ಯಕ್ಕೆ ನ್ಯಾಯಾಲಯದ ವ್ಯಾಪ್ತಿಯಲ್ಲಿದೆ" ಎಂದು ಹೇಳಿದ್ದಾರೆ.

ಈ ಕುರಿತ ವರದಿಗಳು ಸರಿಯಲ್ಲ ಎಂದು ಯಾದವ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಹಾಗೂ ಯೆಚೂರಿಯವರ ಹೆಸರನ್ನು ಆರೋಪಿಯೊಬ್ಬ ಒಂದು ಕಡೆ ಉಲ್ಲೇಖಿಸಿರುವುದು ದಾಖಲಾಗಿದೆ. ಆದರೆ ಪೂರಕ ಆರೋಪಪಟ್ಟಿಯಲ್ಲಿ ನಮ್ಮ ಹೆಸರನ್ನು ಸಹ ಸಂಚುದಾರರು ಎಂದಾಗಲೀ, ಆರೋಪಿಗಳೆಂದಾಗಲೀ ಹೆಸರಿಸಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News