ರೈತರನ್ನು ಬಂಡವಾಳಶಾಹಿಗಳಿಗೆ ಒತ್ತೆಯಿಡಲು ಕೇಂದ್ರದ ಹುನ್ನಾರ: ಮಾಜಿ ಸಿಎಂ ಸಿದ್ದರಾಮಯ್ಯ

Update: 2020-09-13 13:01 GMT

ಬೆಂಗಳೂರು, ಸೆ.13: ಕೇಂದ್ರ ಸರಕಾರ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರನ್ನು ಹಾಗೂ ಭೂಮಿಯನ್ನು ಬಂಡವಾಳಶಾಹಿಗಳಿಗೆ ಒತ್ತೆ ಇಡಲು ಮುಂದಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಜನಪ್ರಕಾಶನ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ನಿವೃತ್ತ ನ್ಯಾ.ನಾಗಮೋಹನದಾಸ್‍ರವರ 'ರೈತರ ಭದ್ರತೆ ದೇಶದ ಭದ್ರತೆ' ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಆನ್‍ಲೈನ್ ಮಾರಾಟ ಸೇರಿದಂತೆ ಹಲವು ಸುಧಾರಣೆಗಳು ಜಾರಿಯಲ್ಲಿದ್ದವು. ಆದರೆ, ಕೇಂದ್ರ ಸರಕಾರ ಇಡೀ ಎಪಿಎಂಸಿ ವ್ಯವಸ್ಥೆಯನ್ನೇ ನಿರ್ಮೂಲನೆ ಮಾಡಲು ಹೊರಟಿರುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿಯವರೆಗೂ ರೈತರು ತಾವು ಬೆಳೆದ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡುವಂತಹವ್ಯವಸ್ಥೆ ಇತ್ತು. ಆದರೆ, ಈಗ ಕೇಂದ್ರ ಸರಕಾರ ಎಪಿಎಂಸಿಗೆ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರೈತರು ತಮ್ಮ ಜಮೀನಿನಲ್ಲೇ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಬಹುದಾಗಿದೆ. ಇದು ಆರಂಭದಲ್ಲಿ ಆಕರ್ಷಣೀಯವಾಗಿ ಕಾಣಬಹುದು. ಆದರೆ, ಈ ವ್ಯವಸ್ಥೆಯನ್ನು ಬಂಡವಾಳಶಾಹಿಗಳು ಸಂಪೂರ್ಣವಾಗಿ ಆವರಿಸಿದ ನಂತರ ಇದರ ದುಷ್ಪರಿಣಾಮಗಳು ರೈತರಿಗೆ ಕಾಣಲಿದೆ ಎಂದು ಅವರು ತಿಳಿಸಿದರು.

ಇನ್ನು ಮುಂದೆ ರೈತರ ಜಮೀನಿಗೆ ಬಂಡವಾಳಶಾಹಿಗಳು ಲಗ್ಗೆ ಇಟ್ಟು ತಮ್ಮ ಆರ್ಥಿಕ ಸಂಪತ್ತಿನಿಂದ ಕೃಷಿ ಬೆಳೆಗಳನ್ನು ಖರೀದಿಸುತ್ತಾರೆ. ಇದರಿಂದ ಸಣ್ಣಮಟ್ಟದ ವ್ಯಾಪಾರಸ್ಥರು ಬೀದಿಗೆ ಬರಲಿದ್ದಾರೆ. ಹಾಗೂ ಇಡೀ ಕೃಷಿ ಕ್ಷೇತ್ರ ಹಂತ, ಹಂತವಾಗಿ ಬಂಡವಾಳಶಾಹಿಗಳ ಕೂಪಕ್ಕೆ ಸಿಲುಕಲಿದೆ ಎಂದು ಅವರು ಹೇಳಿದರು.

ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಕೇಂದ್ರ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಲಿದ್ದಾರೆ. ಒಟ್ಟಾರೆ ಇಡೀ ಕೃಷಿ ಕ್ಷೇತ್ರವನ್ನೇ ಕಾರ್ಪೊರೇಟ್ ಮಾಡಲು ಹುನ್ನಾರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರ ಯಾವುದೆ ಕಾರಣಕ್ಕೂ ರೈತ, ಕಾರ್ಮಿಕ ಹಾಗೂ ಜನಸಾಮಾನ್ಯರಿಗೆ ವಿರುದ್ಧವಾದಂತಹ ಕಾಯ್ದೆಗಳನ್ನು ಜಾರಿ ಮಾಡದಂತೆ ಪ್ರತಿಪಕ್ಷವಾಗಿ ಕಾಂಗ್ರೆಸ್ ಸದನದಲ್ಲಿ ಹೋರಾಟ ಮಾಡುತ್ತೇವೆ. ಅದೇ ರೀತಿ ಸದನದ ಹೊರತೆ ಜನಪರ ಶಕ್ತಿಗಳು ಒಗ್ಗೂಡಿ ಹೋರಾಟ ಮಾಡಬೇಕು. ದೇಶದಲ್ಲಿ ಜನವಿರೋಧಿ ಕಾಯ್ದೆಗಳು ಅನುಷ್ಟಾನಕ್ಕೆ ಬರದಂತೆ ನಿರಂತರವಾದ ಹೋರಾಟ ಅಗತ್ಯವಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ, ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ, ಲೇಖಕ ಹಾಗೂ ನ್ಯಾ.ನಾಗಮೋಹನ ದಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೇಂದ್ರ ಸರಕಾರ ಏಕಪಕ್ಷೀಯವಾಗಿ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ, ಭೂ ಸುಧಾರಣೆ, ಅರಣ್ಯ ಹಕ್ಕು ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿ ಕಾಯ್ದೆಗಳನ್ನು ದೇಶದ ಎಲ್ಲ ರಾಜ್ಯಗಳೂ ಜಾರಿಗೆ ತಂದು ವರದಿ ನೀಡಬೇಕೆಂದು ಒತ್ತಡ ಹೇರಲಾಗುತ್ತಿದೆ. ಕೇಂದ್ರದ ಇಂತಹ ಏಕಸ್ವಾಮ್ಯ ನಿರ್ಧಾರ ಹಾಗೂ ಒತ್ತಡ ಹಾಕುವಂತಹ ಸ್ವಭಾವವು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಲಿದೆ'

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News