ಡ್ರಗ್ಸ್ ವಿಚಾರಣೆಯ ದಾರಿ ತಪ್ಪಿಸಲು ನನ್ನ ಹೆಸರು ಬಳಕೆ: ಕುಮಾರಸ್ವಾಮಿ ಆರೋಪ

Update: 2020-09-13 12:24 GMT

ಬೆಂಗಳೂರು, ಸೆ. 13: ಡ್ರಗ್ಸ್ ವಿಚಾರಣೆಯ ದಾರಿ ತಪ್ಪಿಸಲು ನನ್ನ ಹೆಸರನ್ನು ಬಳಕೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2014ರಲ್ಲಿ ಪಕ್ಷದ ಸಭೆ ಮಾಡಲು ಶ್ರೀಲಂಕಾಕ್ಕೆ ಹೋಗಿದ್ದೆವು. ಗೋವಾ, ಬೇರೆ ಕಡೆಗಿಂತ ಅಲ್ಲಿ ಕಡಿಮೆ ಬೆಲೆಯಾಗುತ್ತೆ ಎಂದು ಅಲ್ಲಿ ಸಭೆ ಮಾಡಿದ್ದೆವು. ಆ ವಿಚಾರವನ್ನು ಈಗ ಯಾಕೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು ಎಂದರು.

ನಾನು ಶ್ರೀಲಂಕಾಗೆ ಹೋಗಿದ್ದು ನಿಜ. ನಮ್ಮ ಪಕ್ಷದ ಮುಖಂಡರ ಜತೆ ಹೋಗಿದ್ದೆ. ಗೋವಾ, ಇನ್ನಿತರ ಕಡೆ ಸಭೆ ನಡೆಸಿದರೆ ದುಬಾರಿಯಾಗುತ್ತದೆ ಅಂತ ಕೊಲೊಂಬೋ ಹೋಗಿದ್ದೆವು. ಪಕ್ಷದ ಎಲ್ಲಾ ಮುಖಂಡರು ಹೋಗಿ ಅಲ್ಲಿ ಚರ್ಚೆ ನಡೆಸಿದ್ದೇವೆ. ಅದಕ್ಕೂ ಈಗಿನ ಡ್ರಗ್ಸ್ ಪ್ರಕರಣಕ್ಕೂ ಸಂಬಂಧ ಏನು?. ನಮಗೆ ಶ್ರೀಲಂಕಾಗೆ ಹೋಗಲು ಬರುವುದಿಲ್ಲವೇ? ಎಂದು ಪ್ರಶ್ನಿಸಿದರು.

ನಾನು ಸಿಎಂ ಆಗಿದ್ದಾಗ ಬೆಂಗಳೂರಲ್ಲಿನ ಬಾರ್ ವ್ಯವಹಾರಗಳ ಬಗ್ಗೆ ತನಿಖೆ ಮಾಡಲು ಸೂಚಿಸಿದ್ದೆ. ಮಲ್ಯ ರಸ್ತೆಯಲ್ಲಿ ಮಧ್ಯರಾತ್ರಿ 12ಕ್ಕೆ ಹೋದರೆ ನಾವು ಇಂಡಿಯಾದಲ್ಲಿ ಇದ್ದೇವಾ ಎಂಬ ಪ್ರಶ್ನೆ ಮೂಡುತ್ತದೆ. ಕ್ಯಾಸಿನೋ ಮಾದರಿ ನೈಟ್ ಪಾರ್ಟಿಗಳು ಬೆಂಗಳೂರಲ್ಲೇ ನಡೆಯುತ್ತವೆ. ಈ ಹಿಂದೆ ಇಂಥ ಪಾರ್ಟಿಗಳು ನಡೆಯುತ್ತಿದ್ದವು. ಇವಾಗ ಯಾವ ರೀತಿ ಅಂತಾ ಗೊತ್ತಿಲ್ಲ ಎಂದು ವಿವರಿಸಿದರು.

ಶಾಸಕ ಝಮೀರ್ ಅಹ್ಮದ್ ಖಾನ್ ಆರೋಪ ಸಂಬಂಧ ಸ್ಪಷ್ಟನೆ ನೀಡುತ್ತಾ, ಡ್ರಗ್ಸ್ ಮಾಫಿಯಾ ಕೇಸ್ ತನಿಖೆ ಹಂತದಲ್ಲಿದೆ. ಈಗ ದಾರಿ ತಪ್ಪುವ ಪ್ರಯತ್ನ ಮಾಡಬಾರದು. ನಮ್ಮ ಹಳೆಯ ಸ್ನೇಹಿತರು ಈಗ ಏಕೆ ಅದನ್ನು ಪ್ರಸ್ತಾಪ ಮಾಡಿದ್ರು ಗೊತ್ತಿಲ್ಲ. ನಾನು ಝಮೀರ್ ಆರೋಪಗಳಿಗೆ ಉತ್ತರ ಕೊಡೋಕೆ ಆಗೋದಿಲ್ಲ ಎಂದು ಹೇಳಿದರು.

ಇದೇ ವೇಳೆ ಝಮೀರ್ ಅವರು ನಿಮ್ಮನ್ನು ಕರೆದುಕೊಂಡು ಹೋಗಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್‍ಡಿಕೆ, ಅವರು ನನ್ನ ಯಾಕೆ ಕರೆದುಕೊಂಡು ಹೋಗುತ್ತಾರೆ. ನಮಗೆ ಹೋಗೊದಕ್ಕೆ ಬರೋಲ್ವಾ ಎಂದು ಉತ್ತರ ನೀಡಿದರು. ಡ್ರಗ್ಸ್ ದಂಧೆ ಕೇವಲ ಸ್ಯಾಂಡಲ್‍ವುಡ್ ಮಾತ್ರವಲ್ಲ ಎಲ್ಲ ಕಡೆ ಇದೆ. ನಾನು ಕೂಡ ಸಿನಿಮಾ ಕ್ಷೇತ್ರದಲ್ಲಿ ಇದ್ದವನು. ಆಗ ಡ್ರಗ್ಸ್ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಕ್ಯಾಸಿನೋದಲ್ಲೇ ಡ್ರಗ್ಸ್ ಇರುತ್ತೆ ಅಂತ ಹೇಳುವುಕ್ಕೆ ಆಗಲ್ಲ ಎಂದು ತಿಳಿಸಿದರು.

ಸ್ಯಾಂಡಲ್ವುಡ್ ಗೆ ಇದೆ ಎನ್ನಲಾದ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಪ್ರಕರಣದ ತನಿಖೆ ದಾರಿ ತಪ್ಪಬಾರದು. ಚಿತ್ರರಂಗದಲ್ಲಿ ಮಾತ್ರ ಡ್ರಗ್ಸ್ ದಂಧೆ ಇಲ್ಲ. ನಾನು ಸಿನಿಮಾ ಕ್ಷೇತ್ರದಲ್ಲೇ ಇದ್ದವನು. ನನ್ನ ಗಮನಕ್ಕೆ ಡ್ರಗ್ಸ್ ವಿಚಾರ ಬಂದಿಲ್ಲ ಎಂದು ಹೆಚ್ಡಿಕೆ ಹೇಳಿದರು. ಡ್ರಗ್ಸ್ ಮಾಫಿಯಾದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಅದನ್ನು ದಿಕ್ಕು ತಪ್ಪಿಸೋ ಕೆಲಸ ನಡೆಯುತ್ತಿದೆ ಎಂದು ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News