ಬೆಂಗಳೂರು ಹಿಂಸಾಚಾರ: ಎನ್‍ಐಎ ತನಿಖೆಗೆ ವಹಿಸಲು ಕೇಂದ್ರ ತೀರ್ಮಾನಿಸಿದೆ; ಹೈಕೋರ್ಟ್ ಗೆ ಹೇಳಿಕೆ

Update: 2020-09-13 13:13 GMT

ಬೆಂಗಳೂರು, ಸೆ. 13: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಹಿಂಸಾಚಾರ ಹಿನ್ನೆಲೆ ದಾಖಲಾದ ಎರಡು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ತಂಡ(ಎನ್‍ಐಎ)ಕ್ಕೆ ವಹಿಸಲು ಕೇಂದ್ರ ತೀರ್ಮಾನಿಸಿದೆ ಎಂದು ಎನ್‍ಐಎ ಹೈಕೋರ್ಟ್‍ಗೆ ತಿಳಿಸಿದೆ.

ಪ್ರಕರಣವನ್ನು ಎನ್‍ಐಎಗೆ ವಹಿಸಬೇಕೆಂದು ಮನವಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.

ಎನ್‍ಐಎ ಪರ ವಾದಿಸಿದ ವಕೀಲ ಪಿ.ಪ್ರಸನ್ನ ಕುಮಾರ್ ಅವರು, ಯುಎಪಿಎ ಕಾಯ್ದೆಯಡಿ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಠಾಣೆಯಲ್ಲಿ ತಲಾ ಒಂದರಂತೆ ಎರಡು ಪ್ರತ್ಯೇಕ ಎಫ್‍ಐಆರ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣಗಳನ್ನು ಎನ್‍ಐಎಗೆ ವಹಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಈ ಬಗ್ಗೆ ಕೇಂದ್ರ ಸರಕಾರದಿಂದ ಎರಡ್ಮೂರು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಪೀಠಕ್ಕೆ ತಿಳಿಸಿದರು.

ಅಡ್ವಕೇಟ್ ಜನರಲ್ ಪ್ರಭುಲಿಂಗ್ ಕೆ. ನಾವದಗಿ ವಾದಿಸಿ, ಗಲಭೆ ಸಂಬಂಧ ಖಾಸಗಿ ಆಸ್ತಿ-ಪಾಸ್ತಿ ನಷ್ಟದ ಅಂದಾಜು ಮಾಡಿ ಹೊಣೆಗಾರಿಕೆ ನಿಗದಿಪಡಿಸಲು ಕೋರ್ಟ್ ನಿರ್ದೇಶನದಂತೆ ನ್ಯಾ.ಎಚ್.ಎಸ್.ಕೆಂಪಣ್ಣ ಅವರನ್ನು ಕ್ಲೆಮ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ ಎಂದು ನೇಮಿಸಿದ ಆದೇಶದ ಪ್ರತಿಗಳನ್ನು ಪೀಠಕ್ಕೆ ಸಲ್ಲಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಗಲಭೆ ಪ್ರಕರಣಗಳ ತನಿಖಾ ಪ್ರಗತಿ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.21ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News