ಕೃಷಿ ಸುಧಾರಣೆ: ಕೇಂದ್ರದ ವಿರುದ್ಧ ಸಂಘಟಿತ ಹೋರಾಟಕ್ಕೆ ಪ್ರಮುಖ ರೈತ ಸಂಘಟನೆಗಳು ಕರೆ

Update: 2020-09-14 04:47 GMT

ಹೊಸದಿಲ್ಲಿ: ದೇಶದ ಪ್ರಾಚೀನ ಕೃಷಿ ವಲಯವನ್ನು ಮುಕ್ತಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಪ್ರಮುಖ ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕೃಷಿ ಸುಧಾರಣೆ ಸಂಬಂಧದ ಮೂರು ಅಧ್ಯಾದೇಶಗಳಿಗೆ ಒಪ್ಪಿಗೆ ಪಡೆಯುವ ಸಲುವಾಗಿ ಸೋಮವಾರ ಆರಂಭವಾಗುವ ಲೋಕಸಭೆ ಅಧಿವೇಶನದಲ್ಲಿ ಸರ್ಕಾರ ಮಸೂದೆ ಮಂಡಿಸಲಿದ್ದು, ಇದರ ವಿರುದ್ಧ ಸಂಘಟಿತ ಹೋರಾಟಕ್ಕೆ ಪ್ರಮುಖ ರೈತ ಸಂಘಟನೆಗಳು ಕರೆ ನೀಡಿವೆ.

ಕೃಷಿ ಉತ್ಪನ್ನ ವಹಿವಾಟಿನ ಮೇಲಿನ ನಿರ್ಬಂಧವನ್ನು ಕಿತ್ತುಹಾಕುವ, ಕೃಷಿ ಉತ್ಪನ್ನಗಳನ್ನು ಬೆಳೆಯುವ ಮುನ್ನವೇ ಬೆಳೆಗೆ ಬೆಲೆ ನಿರ್ಧರಿಸುವುದಕ್ಕೆ ಕಾನೂನಾತ್ಮಕ ಒಪ್ಪಿಗೆ ನೀಡುವ ಹಾಗೂ ಗುತ್ತಿಗೆ ಕೃಷಿಗೆ ಹೊಸ ವಿನ್ಯಾಸ ರೂಪಿಸುವ ಉದ್ದೇಶದ ಮೂರು ಅಧ್ಯಾದೇಶಗಳು ರೈತರ ಪಾಲಿಗೆ ಮಾರಕವಾಗುವ ಅಪಾಯವಿದೆ ಎನ್ನುವುದು ಅರ್ಥಶಾಸ್ತ್ರಜ್ಞರ ಮತ್ತು ರೈತ ಸಂಘಟನೆಗಳ ಭೀತಿ. ದೊಡ್ಡ ಆಹಾರ ವಹಿವಾಟು ಏಕಸ್ವಾಮ್ಯ ಸಂಸ್ಥೆಗಳು ರೈತರನ್ನು ಶೋಷಿಸುವ ಭೀತಿ ಇದೆ ಎಂದು ತಜ್ಞರು ಹೇಳಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಹೋರಾಟವನ್ನು ಬೆಂಬಲಿಸಿದ್ದು, ಇದನ್ನು ಆಯ್ದ ಸಂಸದೀಯ ಸಮಿತಿಗಳ ಪರಾಮರ್ಶೆಗೆ ಕಳುಹಿಸುವಂತೆ ಒತ್ತಾಯಿಸುವ ಮೂಲಕ ಅಧ್ಯಾದೇಶ ತಡೆಯಲು ಪ್ರಯತ್ನಿಸಲಾಗುವುದು ಎಂದು ಸ್ಪಷ್ಟಪಡಿಸಿವೆ.

ಆಹಾರಧಾನ್ಯಗಳನ್ನು ಅಧಿಕವಾಗಿ ಬೆಳೆಯುವ ಹರ್ಯಾಣ ಮತ್ತು ಪಂಜಾಬ್‍ನಂಥ ರಾಜ್ಯಗಳಲ್ಲಿ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧ ಹಕ್ಕಾಗಿ ಪರಿಗಣಿಸುವಂತೆ ಆಗ್ರಹಿಸುವ ಮೂಲಕ ಪ್ರಭಾವಿ ರೈತ ಸಂಘಟನೆಗಳು ಕೂಡಾ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿವೆ.

200ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಸೊಮವಾರ ರಾಜಧಾನಿಯಲ್ಲಿ ಪ್ರತಿಭಟನಾ ರ್ಯಾಲಿ ಆಯೋಜಿಸಿದೆ. ಆರೆಸ್ಸೆಸ್ ಬೆಂಬಲಿತ ಭಾರತೀಯ ಕಿಸಾನ್ ಸಂಘ ಕೂಡಾ ಈ ಅಧ್ಯಾದೇಶದ ಬಗ್ಗೆ ಅಸಮಾಧಾನ ಹೊಂದಿದೆ. ರೈತ ಸಮುದಾಯಕ್ಕೆ ಸೂಕ್ತ ಭದ್ರತೆ ನೀಡುವಂತೆ ಸಂಘಟನೆ ಆಗ್ರಹಿಸಿದೆ. ಎಡಪಂಥೀಯ ಆಲ್ ಇಂಡಿಯಾ ಕಿಸಾನ್ ಸಭಾ ಕೂಡಾ ಈ ಅಧ್ಯಾದೇಶವನ್ನು 'ಕಾರ್ಪೊರೇಟ್ ಕಂಪನಿಗಳ ಪರ ಹಾಗೂ ರೈತವಿರೋಧಿ' ಎಂದು ಬಣ್ಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News