ಸಂಸದರಿಗೆ ಸ್ಯಾನಿಟೈಸರ್, ಮಾಸ್ಕ್‌ಗಳಿರುವ ಕೋವಿಡ್ ಕಿಟ್ ನೀಡಿದ ಸ್ಪೀಕರ್

Update: 2020-09-14 07:37 GMT

ಹೊಸದಿಲ್ಲಿ, ಸೆ.14: ಇಂದು ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಲುವ ಎಲ್ಲ ಸಂಸದರಿಗೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಕೋವಿಡ್ ಕಿಟ್‌ಗಳನ್ನು ನೀಡಲಾಗಿದೆ.

ಇಂದಿನಿಂದ 18 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಹಲವಾರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಡಿಆರ್‌ಡಿಒ(ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ದಿ ಸಂಸ್ಥೆ)ಒದಗಿಸಿದ ಕಿಟ್‌ಗಳನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರಿಗೆ ರವಿವಾರವೇ ಕಳುಹಿಸಿಕೊಟ್ಟದ್ದಾರೆ.

ಪ್ರತಿ ಕೋವಿಡ್ ಕಿಟ್‌ನಲ್ಲಿ ಬಳಸಿ ಬಿಸಾಡಬಹುದಾದ 40 ಮುಖಗವಸುಗಳು,ಐದು ಎನ್-95 ಮಾಸ್ಕ್‌ಗಳು,ತಲಾ 50 ಮಿಲಿಲೀಟರ್ 20 ಸ್ಯಾನಿಟೈಸರ್‌ ಬಾಟಲ್‌ಗಳು, ಫೇಸ್ ಶೀಲ್ಡ್‌ಗಳು, 40 ಜೋಡಿ ಕೈಗವಸುಗಳು, ಬಾಗಿಲನ್ನು ಮುಟ್ಟದೆ, ಅದನ್ನು ತೆರೆಯಲು ಹಾಗೂ ಮುಚ್ಚುವಂತಾಗಲು ಸ್ಪರ್ಶಮುಕ್ತ ಕೊಕ್ಕೆಗಳು,ಹರ್ಬಲ್ ಸ್ಯಾನಿಟೈಸ್ ಒರೆಸುವ ಬಟ್ಟೆಗಳು,ರೋಗ ನಿರೋಧಕ ಹೆಚ್ಚಿಸುವ ಟೀ ಬ್ಯಾಗ್‌ಗಳು ಇವೆ. ಪ್ರತಿ ಕಿಟ್‌ನಲ್ಲಿ ಸಂಸದರಿಗೆ ಕೋವಿಡ್ ಸುರಕ್ಷತೆಯ ಕೈಪಿಡಿಗಳು ಇವೆ.

"ನಿಮ್ಮ ಬಳಕೆಗಾಗಿ ನಾನು ಈ ಪತ್ರದ ಜೊತೆಗೆ ಸ್ಯಾನಿಟೈಸರ್ ಕಿಟ್‌ಗಳನ್ನು ಕಳುಹಿಸುತ್ತಿದ್ದೇನೆ. ಡಿಆರ್‌ಡಿಒ ಒದಗಿಸಿದ ಕಿಟ್‌ನಲ್ಲಿ ಸ್ಯಾನಿಟೈಸರ್,ಫೇಸ್ ಮಾಸ್ಕ್, ಶೀಲ್ಡ್ ಮಾಸ್ಕ್ ಇತ್ಯಾದಿಗಳಿವೆ.ಸದನ ಪ್ರಕ್ರಿಯೆ ನಡೆಸಲು ನೀವು ಸಂಪೂರ್ಣ ಸಹಕಾರ ನೀಡುವ ವಿಶ್ವಾಸದಲ್ಲಿದ್ದೇನೆ'' ಎಂದು ಸ್ಪೀಕರ್ ಹೇಳಿದ್ದಾರೆ.

ಕನಿಷ್ಠ ಏಳು ಕೇಂದ್ರ ಸಚಿವರಿಗೆ ಕೊರೋನ ವೈರಸ್ ಸೋಂಕು ತಗಲಿದ್ದು, ಎರಡು ಡಜನ್‌ಗೂ ಅಧಿಕ ಸಂಸದರಿಗೂ ಕೊರೋನ ವೈರಸ್ ಬಾಧಿಸಿದ್ದು, ಇವೆರಲ್ಲರೂ ಚೇತರಿಸಿಕೊಂಡಿದ್ದಾರೆ. 785 ಸಂಸದರ ಪೈಕಿ 200ರಷ್ಟು ಸಂಸದರು 65 ವಯಸ್ಸಿಗಿಂತ ಮೇಲ್ಪಟ್ಟವರು. ಅಧಿವೇಶನಕ್ಕೆ ಮೊದಲು ಎಲ್ಲ ಸದಸ್ಯರುಗಳಿಗೆ ಸ್ವತಃ ಕೋವಿಡ್-19 ಪರೀಕ್ಷೆಗೆ ಒಳಗಾಗಲು ವಿನಂತಿಸಲಾಗಿತ್ತು. ಇದರಲ್ಲಿ ಓರ್ವ ಸಂಸದನಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News