ಜಿಕೆವಿಕೆಯಲ್ಲಿ ನಡೆಯುವ ಕೃಷಿ ಮೇಳದ ಮೇಲೆ ಕೊರೋನ ಕರಿಛಾಯೆ

Update: 2020-09-15 16:00 GMT

ಬೆಂಗಳೂರು, ಸೆ.15: ಹೊಸ ರೂಪದಲ್ಲಿ ಬೆಂಗಳೂರು ಕೃಷಿ ವಿವಿ(ಜಿಕೆವಿಕೆ)ಯು 2020 ನೇ ಸಾಲಿನ ಕೃಷಿ ಮೇಳವನ್ನು ಆಯೋಜನೆ ಮಾಡಲು ಆಲೋಚಿಸಿತ್ತು. ಆದರೆ, ಕೊರೋನ ಕೃಷಿ ಮೇಳದ ಮೇಲೆ ಕರಿಛಾಯೆ ಮೂಡಿಸಿದೆ.

ದೇಶದಲ್ಲೇ ಖ್ಯಾತಿ ಪಡೆದಿರುವ ಜಿಕೆವಿಕೆಯಲ್ಲಿ ನಡೆಯುವ ಕೃಷಿ ಮೇಳವು ಲಕ್ಷಾಂತರ ಜನರನ್ನು ಆಕರ್ಷಣೆ ಮಾಡುತ್ತದೆ. ನಾನಾ ರಾಜ್ಯಗಳಿಂದ ಆಗಮಿಸುವ ಪ್ರಗತಿಪರ ರೈತರಿಗೆ ಕೃಷಿ ಪರಿಣತಿ ಬೆಳೆಸಿಕೊಳ್ಳಲು ವೇದಿಕೆ ಕಲ್ಪಿಸುತ್ತಿದೆ. ವರ್ಷಕ್ಕೊಮ್ಮೆ ರೈತರು, ಕೃಷಿ ತಜ್ಞರು, ವಿಜ್ಞಾನಿಗಳು, ಕೃಷಿ ಆಸಕ್ತರು ಒಂದೆಡೆ ಸೇರಿ ವ್ಯವಸಾಯದ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದರು.

ಕಳೆದ ವರ್ಷ ಅ.24ರಿಂದ 27ರ ವರೆಗೆ ಕೃಷಿ ಮೇಳ ನಡೆದಿತ್ತು. ಸರಿಸುಮಾರು 12 ಲಕ್ಷ ಮಂದಿ ಭೇಟಿ ನೀಡಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿತ್ತು. ಇದನ್ನಾಧರಿಸಿ 2020ನೇ ಸಾಲಿನ ಮೇಳವನ್ನು ಇನ್ನಷ್ಟು ಹೊಸ ರೂಪದಲ್ಲಿ ಸಂಘಟಿಸಲು ವಿವಿ ಆಲೋಚಿಸಿತ್ತು. ಅ.21ರಿಂದ ನಾಲ್ಕು ದಿನ ಮೇಳ ನಡೆಸಲು ಉತ್ಸುಕತೆಯಲ್ಲಿತ್ತು. ಆದರೆ, ಕೊರೋನ ಸೋಂಕಿನ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ದೊಡ್ಡ ಕಾರ್ಯಕ್ರಮಗಳಿಗೆ ಅನುಮತಿ ಲಭಿಸುವುದು ಕಷ್ಟವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಕೆವಿಕೆ ಆವರಣದಲ್ಲಿರುವ ಮಹಿಳಾ ಹಾಸ್ಟೆಲ್ ಹಾಗೂ ತೋಟಗಾರಿಕೆ ಕಾಲೇಜನ್ನು ಕೊರೋನ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಇದು ಕೂಡ ಮೇಳ ಆಯೋಜಿಸಲು ಅಡ್ಡಿಯಾಗಲಿದೆ ಎಂದು ವಿವಿ ಮೂಲಗಳು ತಿಳಿಸಿವೆ.

ಸರಳ, ಸಾಂಕೇತಿಕ ಆಚರಣೆಗೆ ಚಿಂತನೆ: ಕೊರೋನ ಹಿನ್ನೆಲೆಯಲ್ಲಿ ಜನರ ಸುರಕ್ಷಿತ ದೃಷ್ಟಿಯಿಂದ ಸಾಂಕೇತಿಕವಾಗಿ ಆಚರಿಸಲು ವಿಶ್ವವಿದ್ಯಾಲಯವು ಚಿಂತನೆ ನಡೆಸಿದೆ. ಕೇವಲ ವಿವಿಯ ನಾನಾ ವಿಭಾಗಗಳ ಸಾಧನೆ, ಸಂಶೋಧನೆಯನ್ನು ರೈತರಿಗೆ ಮಾತ್ರ ವೀಕ್ಷಣೆಗೆ ಅವಕಾಶ ನೀಡಲು ಆಲೋಚನೆ ನಡೆದಿದೆ.

ವಿವಿಯು ಬೃಹತ್ ಸಭಾಂಗಣ ಹೊಂದಿದ್ದು, ಅಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಕಾರ್ಯಕ್ರಮ ರೂಪಿಸಬಹುದಾಗಿದೆ. ಕೆಲ ತಾಕುಗಳಿಗೆ ರೈತರನ್ನು ಕರೆದೊಯ್ದು ಮಾಹಿತಿ ನೀಡಬಹುದು. ಈ ಪ್ರಸ್ತಾವಕ್ಕೆ ಕೃಷಿ ಸಚಿವರು ಹಾಗೂ ಸರಕಾರದಿಂದ ಒಪ್ಪಿಗೆ ಪಡೆಯಲು ಸಂಘಟಕರು ಮುಂದಾಗಿದ್ದಾರೆ. ಇದಕ್ಕೆ ಇನ್ನಷ್ಟೇ ಸ್ಪಂದನೆ ಸಿಗಬೇಕಿದ್ದು, ಸರಕಾರ ಒಪ್ಪದಿದ್ದರೆ ಮೇಳ ಕೈಬಿಡಬೇಕಾಗುತ್ತದೆ ಎಂದು ತಿಳಿದು ಬಂದಿದೆ.

ಯುಎಎಸ್-ಬಿ ಕೃಷಿ ಮೇಳಕ್ಕೆ ಅನುಮತಿ ಸಿಗದಿದ್ದರೆ ಧಾರವಾಡ ವಿವಿ, ರಾಯಚೂರು ವಿವಿ, ಶಿವಮೊಗ್ಗ ವಿವಿಗಳ ಮೇಳಕ್ಕೂ ತಡೆ ಬೀಳಲಿದೆ. ಜತೆಗೆ ಆಯಾ ವಿವಿಗಳ ಸಂಶೋಧನಾ ಕೇಂದ್ರಗಳಲ್ಲಿ ನಡೆಯಬೇಕಿದ್ದ ಕ್ಷೇತ್ರೋತ್ಸವ, ಜಿಲ್ಲಾಮೇಳಗಳನ್ನು ಮುಂದೂಡುವುದು ಅನಿವಾರ್ಯವಾಗಲಿದೆ

ಸಂಪನ್ಮೂಲ ಸಂಗ್ರಹ ಕಷ್ಟ: ಪ್ರತಿ ವರ್ಷ ಕೃಷಿ ಮೇಳಕ್ಕೆ ಸರಿಸುಮಾರು ಒಂದು ಕೋಟಿ ರೂ. ವೆಚ್ಚವಾಗುತ್ತಿದೆ. ಐಸಿಎಆರ್ ನಿಂದ ಒಂದಿಷ್ಟು ಹಣ ಸಿಕ್ಕರೆ, ರಾಜ್ಯ ಸರಕಾರದಿಂದ ಅತ್ಯಲ್ಪ ಅನುದಾನ ಮಾತ್ರ ಸಿಗುತ್ತಿದೆ. ಉಳಿದ ಹಣವನ್ನು ಸಂಘಟಕರು, ಖಾಸಗಿ ಕಂಪನಿಗಳು ಹಾಗೂ ಜಾಹೀರಾತು ಸಂಸ್ಥೆಗಳ ಮಳಿಗೆ ಶುಲ್ಕದ ರೂಪದಲ್ಲಿ ಸಂಗ್ರಹಿಸುತ್ತಿದ್ದಾರೆ. ಈ ಬಾರಿಯ ಮೇಳಕ್ಕೆ ಜಾಹೀರಾತು ಕಂಪನಿಗಳು ಇನ್ನೂ ಆಸಕ್ತಿಯನ್ನೇ ತೋರಿಸಿಲ್ಲ. ಇದರಿಂದ ಮೇಳ ಆಯೋಜನೆಗೆ ಹಣಕಾಸಿನ ಕೊರತೆ ಎದುರಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News