ಸರ್‍ಎಂವಿ ಮಾದರಿಯಂತೆ ಕಾಮಗಾರಿಗಳನ್ನು ಕೈಗೊಳ್ಳಿ: ಇಂಜಿನಿಯರ್ ಗಳಿಗೆ ಉಪ ಮುಖ್ಯಮಂತ್ರಿ ಕಾರಜೋಳ ಕರೆ

Update: 2020-09-15 18:39 GMT

ಬೆಂಗಳೂರು, ಸೆ.15: ವಿಶ್ವಕಂಡ ಮಹಾನ್ ಇಂಜಿನಿಯರ್ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ತತ್ವ, ಸಿದ್ಧಾಂತ, ಆದರ್ಶ ಹಾಗೂ ತಂತ್ರಜ್ಞಾನವನ್ನು ಎಲ್ಲ ಇಂಜಿನಿಯರ್ ಗಳು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗಾಗಿ ಅವರ ಮಾದರಿಯಂತೆ ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕರೆ ನೀಡಿದರು.

ಮಂಗಳವಾರ ನಗರದ ಕೆ.ಆರ್.ವೃತ್ತದ ಬಳಿ ಇರುವ ಸರ್.ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಇಂಜಿನಿಯರ್ ಗಳ ದಿನಾಚರಣೆಯ ಅಂಗವಾಗಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಸರ್ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪರಿಮಿತವಾದುದು. ಮೈಸೂರಿನ ಕೆ.ಆರ್. ಸಾಗರ, ಹಿರಿಯೂರಿನ ವಾಣಿವಿಲಾಸ ಸಾಗರ, ಸೇರಿದಂತೆ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿದ್ದಾರೆ. ಕುಡಿಯುವ ನೀರಿಗಾಗಿ ವಿಜಯಪುರ ಸೇರಿದಂತೆ ಅನೇಕ ಕೆರೆಗಳನ್ನು ನಿರ್ಮಿಸಿದ್ದಾರೆ. ಅವರು ಅಂದು ನಿರ್ಮಿಸಿದ ಅಣೆಕಟ್ಟು, ಕೆರೆಗಳು ಇಂದಿಗೂ ಸುಭದ್ರವಾಗಿದ್ದು, ನೀರಾವರಿ ಹಾಗೂ ಕುಡಿಯುವ ನೀರಿನ ಮೂಲಕ್ಕೆ ಆಧಾರವಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತಹ ಪರಿಣಿತ ತಂತ್ರಜ್ಞಾನ ಹಾಗೂ ಪೂರಕ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಶಾಶ್ವತವಾಗಿರುವಂತಹ ಕಾಮಗಾರಿಗಳನ್ನು ಕೈಗೊಂಡು ಅಜರಾಮರವಾಗಿ, ವಿಶ್ವವಿಖ್ಯಾತರಾಗಿದ್ದಾರೆ. ಇಂದಿನ ಇಂಜಿನಿಯರ್ ಗಳು ಅಂತಹ ತಂತ್ರಜ್ಞಾನದ ಪರಿಣಿತಿ ಪಡೆಯಬೇಕು. ಇಂಜಿನಿಯರ್ ಗಳು ತಮ್ಮ ಉದ್ಯೋಗವನ್ನು ಕೇವಲ ಸರಕಾರದ ಸೇವೆ ಎಂದು ಭಾವಿಸದೆ, ದೇಶದ ಅಭಿವೃದ್ಧಿಗಾಗಿ ಉನ್ನತಿಗಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ನೂತನ ಆವಿಷ್ಕಾರ, ಮೂಲಭೂತಸೌಕರ್ಯಗಳ ಅಭಿವೃದ್ಧಿ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದೇಶ ದಾಪುಗಾಲಿಡಲು ಹೆಮ್ಮೆಯ ಇಂಜಿನಿಯರ್ ಗಳು ಕೊಡುಗೆ ಅಪರಿಮಿತ ಎಂದು ಸ್ಮರಿಸಿದ ಉಪಮುಖ್ಯಮಂತ್ರಿ, ಇಂಜಿನಿಯರ್ ಗಳಿಗೆ ಶುಭಾಶಯಗಳನ್ನು ಕೋರಿದರು. ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಬಿ.ಗುರುಪ್ರಸಾದ್, ವಿವಿಧ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News