ಡಿಜೆ ಹಳ್ಳಿ ಗಲಭೆ ಹಿಂಸಾಚಾರದ ಕೋಮುವಾದೀಕರಣ: ನಾಗರಿಕ ಸಂಘಟನೆಗಳ ಸತ್ಯಶೋಧನಾ ವರದಿ ಬಿಡುಗಡೆ

Update: 2020-09-16 17:36 GMT
ಫೈಲ್ ಫೋಟೊ

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆಗೆ ಮೂಲ ಕಾರಣ ಎನ್ನಲಾದ ಫೇಸ್‌ಬುಕ್‌ನಲ್ಲಿ ಆ. 11ರಂದು ನವೀನ್ ಎಂಬಾತ ಹಾಕಿದ ಪೋಸ್ಟ್ ಕುರಿತ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಬೇಕು ಹಾಗೂ ನವೀನ್ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳದಿರುವ ಪೊಲೀಸರ ವೈಫಲ್ಯವನ್ನು ತನಿಖೆಯ ವ್ಯಾಪ್ತಿಗೆ ಸೇರಿಸಬೇಕು ಎಂಬುದು ಸೇರಿದಂತೆ 14 ಮಹತ್ವದ ಶಿಫಾರಸ್ಸುಗಳುಳ್ಳ `ಡಿ.ಜಿ.ಹಳ್ಳಿ ಹಿಂಸಾಚಾರದ ಕೋಮುವಾದೀಕರಣ' ಸತ್ಯಶೋಧನಾ ವರದಿಯನ್ನು ನಿವೃತ್ತ ನಾಯಮೂರ್ತಿ ನಾಗಮೋಹನ್ ದಾಸ್ ಅವರು ಬಿಡುಗಡೆ ಮಾಡಿದರು.

ಬುಧವಾರ ಝೂಮ್ ಆ್ಯಪ್ ಮೂಲಕ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ನಾಗಮೋಹನ್ ದಾಸ್ ಅವರು, ಡಿ.ಜಿ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಹಲವು ವರದಿಗಳು ಬಂದಿದ್ದರೂ, ಇಂದು ಬಿಡುಗಡೆ ಮಾಡಿರುವ ಸತ್ಯಾಶೋಧನಾ ವರದಿ ಸತ್ಯಕ್ಕೆ ಬಹಳ ಹತ್ತರವಾಗಿದೆ. ಗಲಭೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗಬೇಕು. ಅದೇ ರೀತಿಯಲ್ಲಿ ಘಟನೆಯನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡವ ರನ್ನು ತನಿಖೆಯಿಂದ ಬಯಲಿಗೆ ಎಳೆಯಬೇಕು ಎಂದು ಸಲಹೆ ಮಾಡಿದರು.

ಶಿಫಾರಸ್ಸುಗಳು

ಗಲಭೆ ನಿರತ ಗುಂಪಿನ ಜೊತೆಗೆ ಮಾತುಕತೆ ನಡೆಸುವಲ್ಲಿನ ಹಾಗೂ ಗಲಭೆಯನ್ನು ನಿಯಂತ್ರಿಸುವಲ್ಲಿನ ಪೊಲೀಸರ ವೈಫಲ್ಯ ಕುರಿತೂ ತನಿಖೆಗೆ ಆದೇಶಿಸಬೇಕು. ಗಲಭೆಯ ಕುರಿತು ಮುನ್ಸೂಚನೆ ನೀಡುವಲ್ಲಿ ಹಾಗೂ ಗಲಭೆ ನಿಯಂತ್ರಣದಲ್ಲಿ ವಿಫಲವಾದ ಗುಪ್ತಚರ ಇಲಾಖೆಯ ಕಾರ್ಯವೈಖರಿಯನ್ನೂ ತನಿಖೆಗೆ ಒಳಪಡಿಸಬೇಕು. ಗಲಭೆ ಸಂಭವಿಸಿದ ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸಬೇಕು.

ಕೊರೋನ ಲಾಕ್‌ಡೌನ್ ಕಾರಣದಿಂದ ಈ ಪ್ರದೇಶದಲ್ಲಿ ಉಂಟಾಗಿರುವ ಉದ್ಯೋಗ ನಷ್ಟ, ಜೀವನೋಪಾಯ ನಷ್ಟ, ಆರೋಗ್ಯದ ಸಮಸ್ಯೆಗಳು ಮತ್ತು ಪೌಷ್ಟಿಕಾಂಶದ ಕೊರತೆಯನ್ನು ಅಂದಾಜು ಮಾಡಬೇಕು. ಈ ಕೊರತೆಗಳನ್ನು ತುಂಬಿಕೊಡಲು ಮಾನವೀಯ ನೆಲೆಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿಯ ವರದಿಯನ್ನು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಇರುವ 15 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತರಬೇಕು.

ಮುಸ್ಲಿಮರ ಬಗೆಗೆ ಹರಡುತ್ತಿರುವ ದ್ವೇಷ ಮತ್ತು ಭೀತಿಯನ್ನು ತಡೆಗಟ್ಟಲು ತತ್‌ಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು. ಮುಸ್ಲಿಮರ ಕುರಿತು ಹರಡುತ್ತಿರುವ ಸುಳ್ಳುಗಳು, ತಪ್ಪು ಮಾಹಿತಿಗಳು ಈ ಸಮುದಾಯವನ್ನು ಪ್ರತ್ಯೇಕಿಸುತ್ತಿದೆ ಹಾಗೂ ಏಕಾಂಗಿಯಾಗಿಸುತ್ತಿದೆ. ಸಮಾಜದಲ್ಲಿ ಎಲ್ಲ ಸಮುದಾಯಗಳ ನಡುವೆ ಸೌಹಾರ್ದತೆಯನ್ನು ಮತ್ತು ಸಹೋದರತೆಯ ಭಾವವನ್ನು ಮೂಡಿಸುವುದು ಸರಕಾರದ ಆದ್ಯ ಕರ್ತವ್ಯವಾಗಿರುತ್ತದೆ ಹಾಗೂ ಸಮಾಜದ ಸ್ವಾಸ್ಥ್ಯವು ಮತ್ತಷ್ಟು ಹಾಳಾಗದಂತೆ ಕ್ರಮ ವಹಿಸುವುದು ಸರಕಾರದ ಜವಾಬ್ದಾರಿಯಾಗಿದೆ.

ಯುಎಪಿಎ ಪ್ರಕರಣ ಕೈಬಿಡಿ: ಎಲ್ಲ ಸಮುದಾಯಗಳ ಸದಸ್ಯರನ್ನು ಒಳಗೊಂಡಂತಹ ಶಾಂತಿ ಮತ್ತು ಸೌಹಾರ್ದ ಸಮಿತಿಗಳನ್ನು ರಚನೆ ಮಾಡಬೇಕು. ಅಪರಾಧ ಚಟುವಟಿಕೆ ನಿಯಂತ್ರಣ ಕಾಯಿದೆಯ (ಯುಎಪಿಎ) ಅಡಿಯಲ್ಲಿ ಆಪಾದಿತರ ವಿರುದ್ಧ ಹೇರಲಾಗಿರುವ ಆಪಾದನೆಗಳನ್ನು ಈ ಕೂಡಲೇ ಕೈಬಿಡಬೇಕು. ಇಡೀ ಪ್ರಕರಣದ ಕುರಿತು ಪಾರದರ್ಶಕವಾಗಿ, ಕಾನೂನಿನಲ್ಲಿ ವಿಷದಪಡಿಸಿರುವ ನಿಯಮಗಳ ಅನುಸಾರವೇ ಸಮಗ್ರವಾದ ತನಿಖೆ ನಡೆಸಬೇಕು. ಆಪಾದಿತರ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಆರೋಪ ಸಾಬೀತಾಗುವವರೆಗೂ ಅವರು ನಿರಪರಾಧಿಗಳು ಎಂಬ ಅಂಶವನ್ನು ಗೌರವಿಸಬೇಕು. ಬಂಧನ ಪ್ರಕ್ರಿಯೆ ಕುರಿತು ತನಿಖೆ ನಡೆಸಬೇಕು ಹಾಗೂ ನಿರಪರಾಧಿಗಳನ್ನು ಕೂಡಲೆ ಬಿಡುಗಡೆ ಮಾಡಬೇಕು.

ಗಲಭೆಯ ಸಂದರ್ಭ ಆದ ನಷ್ಟವನ್ನು ಅಪರಾಧಿಗಳಿಂದಲೇ ವಸೂಲಿ ಮಾಡುವ ಪ್ರಕ್ರಿಯೆಯನ್ನು ಪ್ರಕರಣದ ತನಿಖೆ ಪೂರ್ಣಗೊಂಡು ತಪ್ಪಿತಸ್ಥರನ್ನು ಗುರುತಿಸಿದ ನಂತರವಷ್ಟೇ ಆರಂಭಿಸಬೇಕು. ನಷ್ಟ ವಸೂಲಿ ಪ್ರಕ್ರಿಯೆಯು ಯಾವುದೇ ರೀತಿಯಲ್ಲಿ ನ್ಯಾಯದಾನ ಪ್ರಕ್ರಿಯೆಯ ಮೇಲೆ ಹಾಗೂ ನಿರಪರಾಧಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರದ ಹಾಗೆ ಎಚ್ಚರವಹಿಸಬೇಕು. ನಿರಂಕುಶ ಬಂಧನ ಕ್ರಮಗಳಿಂದ ಭೀತಿಗೆ ಒಳಗಾಗಿರುವ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಮತ್ತು ಕಾವಲ್‌ಭೈರಸಂದ್ರದ ನಿವಾಸಿಗಳಲ್ಲಿ ಪೊಲೀಸ್ ಇಲಾಖೆ ಕುರಿತು ಮೂಡಿರುವ ಭೀತಿಯನ್ನು ನಿವಾರಿಸಲು ಹಾಗೂ ಸರಕಾರದ ವ್ಯವಸ್ಥೆ ಕುರಿತು ಪುನಃ ವಿಶ್ವಾಸ ಮೂಡಿಸಲು ಸರ್ಕಾರವು ಚಿಕಿತ್ಸಕ ಕ್ರಮಗಳನ್ನು ಕೈಗೊಳ್ಳಬೇಕು.

ದ್ವೇಷಪೂರಿತ ಮಾತುಗಳನ್ನು ಆಡಿದ ಶಾಸಕರ ವಿರುದ್ಧ ಅಪರಾಧ ನೀತಿ ಸಂಹಿತೆ ಅನ್ವಯ ಕ್ರಮ ಕೈಗೊಳ್ಳಬೇಕು. 62 ಜನ ಚುನಾಯಿತ ಪ್ರತಿನಿಧಿಗಳ ವಿರುದ್ಧ ದಾಖಲಾಗಿದ್ದ ಅಪರಾಧ ಪ್ರಕರಣಗಳನ್ನು ಕೈಬಿಡುವ ನಿರ್ಧಾರವನ್ನು ಸರಕಾರ ಹಿಂದಕ್ಕೆ ಪಡೆಯಬೇಕು ಹಾಗೂ ಈ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಿ, ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು.

ನಿರಪರಾಧಿಗಳ ಬಿಡುಗಡೆ ಆಗ್ರಹ: ಆದಷ್ಟು ಶೀಘ್ರವಾಗಿ ಪ್ರಾಥಮಿಕ ವಿಚಾರಣೆಯನ್ನು ನಡೆಸಿ, ನಿರಪರಾಧಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಆಪಾದಿತರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಹಾಗೂ ಆಪಾದಿತರನ್ನು ಎಲ್ಲಿ ಬಂಧನದಲ್ಲಿ ಇಡಲಾಗಿದೆ ಎಂಬ ವಿವರವನ್ನು ಅವರ ಕುಟುಂಬಗಳಿಗೆ ಒದಗಿಸಬೇಕು. ಆರೋಪಿಗಳ ತನಿಖೆ ಪೂರ್ವ ಹತ್ಯೆಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ಪಿಯುಸಿಎಲ್ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಪಾಲಿಸಬೇಕು.

ಪ್ರಚೋದನಾತ್ಮಕ ವರದಿಗಾರಿಕೆ ನಿಲ್ಲಿಸಿ: ಸಮೂಹ ಮಾಧ್ಯಮಗಳಲ್ಲಿ, ಅದರಲ್ಲೂ ಪ್ರಮುಖವಾಗಿ ದೃಶ್ಯ ಮಾಧ್ಯಮದಲ್ಲಿ ಸ್ವಯಂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗಂಭೀರವಾದ ಚರ್ಚೆ ನಡೆಸಬೇಕು. ಗಲಭೆಗಳಿಗೆ ಸಂಬಂಧಿಸಿದಂತೆ ಉದ್ರೇಕಕಾರಿ ಹಾಗೂ ಪ್ರಚೋದನಾತ್ಮಕ ವರದಿಗಾರಿಕೆಯನ್ನು ನಿಲ್ಲಿಸಬೇಕು. ಮಾಧ್ಯಮ ವರದಿಯ ಸತ್ಯಾಸತ್ಯತೆಯನ್ನು ಕೂಲಂಕುಷವಾಗಿ ಪರಿಶೀಲಿಸುವ, ಪ್ರಚೋದನೆ ಮಾಡಬಹುದಾದ ವರದಿಗಳನ್ನು ನಿಯಂತ್ರಿಸುವ ನೀತಿ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಸುದ್ದಿಗೋಷ್ಟಿಯಲ್ಲಿ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ವಾರ್ತಾಭಾರತಿ ಪತ್ರಿಕೆ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಪತ್ರಕರ್ತೆ ಲಕ್ಷ್ಮಿಮೂರ್ತಿ, ಆಲ್ ಇಂಡಿಯಾ ಪೀಪಲ್ಸ್ ಫೋರಂನ ಸ್ವಾತಿ ಶೇಷಾದ್ರಿ, ವಕೀಲ ನಿಯಾಝ್, ಸಾಮಾಜಿಕ ಹೋರಾಟಗಾರ ವಿನಯ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಸತ್ಯಶೋಧನೆ ಸಮಿತಿಯ ತಂಡದಲ್ಲಿ ನೀನಾ ನಾಯಕ್, (ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷೆ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯೆ), ಸಿಂಥಿಯಾ ಸ್ತೀಫನ್ (ಸ್ವತಂತ್ರ ಪತ್ರಕರ್ತರು ಮತ್ತು ಸಂಶೋಧಕರು) ವಿ. ನಾಗರಾಜ್ (ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರು, ಸಂಯೋಜಕ) ಮೋಹನ್‌ರಾಜ್ (ದಲಿತ ಸಂಘರ್ಷ ಸಮಿತಿ, ಭೀಮವಾದದ ರಾಜ್ಯ ಸಂಚಾಲಕರು) ವಕೀಲ ನಿಯಾಝ್ ಮೂಸ (ನಗರಿಕ ಹಕ್ಕುಗಳ ಹಿತರಕ್ಷಣಾ ಸಮಿತಿ, ಕರ್ನಾಟಕ) ಲಿಯೋ ಸಲ್ದಾನ್ಹ (ಪರಿಸರ ನೆರವು ಸಮಿತಿ, ಸಂಚಾಲಕರು) ಗೀತಾ ಮೆನನ್ (ಸ್ತ್ರಿ ಜಾಗೃತಿ ಸಮಿತಿ) ಪ್ರೊ.ವೈ.ಜೆ.ರಾಜೇಂದ್ರ (ಅಧ್ಯಕ್ಷರು, ಪಿಯುಸಿಎಲ್, ಕರ್ನಾಟಕ) ಇರ್ಷಾದ್ ಅಹಮದ್ ದೇಸಾಯಿ (ಮೂವ್‌ಮೆಂಟ್ ಫಾರ್ ಜಸ್ಟೀಸ್) ಮನು ಚೌಧರಿ ಮತ್ತು ಮಧು ಭೂಷಣ್ (ಗಮನ ಮಹಿಳಾ ಸಮೂಹ) ಹೆಬ್ಬಾಳ ವೆಂಕಟೇಶ್ (ದಲಿತ ಸಂಘರ್ಷ ಸಮಿತಿ, ರಾಜ್ಯ ಸಂಚಾಲಕರು) ವಿಜಯ್ ಕುಮಾರ್ ಸೀತಪ್ಪ (ಸ್ವರಾಜ್ ಅಭಿಯಾನ, ಕರ್ನಾಟಕ) ಫಿರ್ದೋಸ್ ಖಾನ್ (ಫಾರ್ವರ್ಡ್ ಟ್ರಸ್ಟ್) ಗಾಂಧಿಮತಿ ಕೆ. (ಅಖಿಲ ಭಾರತ ಪ್ರಗತಿಪರ ಮಹಿಳೆಯರ ಸಂಘಟನೆ) ತನ್ವೀರ್ ಅಹಮದ (ಮೂವ್ಮೆಂಟ್ ಫಾರ್ ಜಸ್ಟೀಸ್) ಷಣ್ಮುಗಂ ಪಿ (ಪೀಪಲ್ಸ್ ಡೆಮಾಕ್ರಟಿಕ್ ಫೋರಂ) ಸ್ವಾತಿ ಶೇಷಾದ್ರಿ (ಆಲ್ ಇಂಡಿಯಾ ಪೀಪಲ್ಸ್ ಫೋರಂ) ಮಲ್ಲಿಗೆ (ಕರ್ನಾಟಕ ಜನಶಕ್ತಿ) ಆಲ್ವಿನ್ ಡಿಸೋಜಾ (ಇಂಡಿಯನ್ ಸೋಷಿಯಲ್ ಇನ್‌ಸ್ಟಿಟ್ಯೂಟ್) ಡಾ. ಸಿದ್ದಾರ್ಥ ಜೋಷಿ (ಸಂಶೋಧಕರು) ಗಣೇಶ್ ಜಿ.(ಪೀಪಲ್ಸ್ ಡೆಮಾಕ್ರೆಟಿಕ್ ಫೋರಂ) ಮತ್ತು ಶಿಲ್ಪಾ ಪ್ರಸಾದ್ (ನ್ಯಾಯಕ್ಕಾಗಿ ಅಖಿಲ ಭಾರತ ವಕೀಲರ ಸಂಘಟನೆ).

''ಬಹುತ್ವ, ಸಹಜೀವನ ಮತ್ತು ಕಾಳಜಿ ಎನ್ನುವುದು ಆರೋಗ್ಯಕರ ಸಮಾಜದ ಲಕ್ಷಣಗಳು. ಇವು ನಮ್ಮ ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಬುನಾದಿಯೂ ಹೌದು. ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಧಾರ್ಮಿಕ ಶ್ರದ್ಧೆಯು ಹೇಗೆ ಸಹಕಾರಿಯಾಗಬಲ್ಲದು ಎಂಬುದರ ಕುರಿತು ಎಲ್ಲ ಸಮುದಾಯಗಳ ಯುವಜನರ ನಡುವೆ ಆರೋಗ್ಯಕರ ಚರ್ಚೆಯನ್ನು ನಡೆಸಬೇಕು''

-ಸತ್ಯಶೋಧನಾ ಸಮಿತಿ ವರದಿ

''ಡಿ.ಜಿ.ಹಳ್ಳಿ ಗಲಭೆ ಸಂಬಂಧ ವಿರೋಧಿ ನೆಲೆಗಟ್ಟಿನ ಕೆಟ್ಟಸ್ಥಿತಿಯಲ್ಲಿರುವುದು ದುರಾದೃಷ್ಟಕರ. ಗಲಭೆ ಪೀಡಿತ ಪ್ರದೇಶದಲ್ಲಿ ಶಾಂತಿ-ಸೌಹಾರ್ದತೆ ರಕ್ಷಿಸುವ ದೃಷ್ಟಿಯಿಂದ ಎಲ್ಲರೂ ಒಟ್ಟಿಗೆ ಕೂತು ಪರಿಹಾರ ಕಂಡುಕೊಳ್ಳಬೇಕಿದೆ. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವುದರ ಜೊತೆಗೆ ಅಮಾಯಕರಿಗೆ ಶಿಕ್ಷೆ ಆಗುವುದನ್ನು ತಪ್ಪಿಸಬೇಕು. ನಾಗರಿಕ ಸೌಲಭ್ಯಗಳಿಂದ ಅತ್ಯಂತ ಹಿಂದುಳಿದಿರುವ ಆ ಪ್ರದೇಶದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಎಲ್ಲರೂ ಆಲೋಚಿಸಬೇಕು'

-ಇಂದೂಧರ ಹೊನ್ನಾಪುರ, ಹಿರಿಯ ಪತ್ರಕರ್ತ

ಡಿ.ಜೆ.ಹಳ್ಳಿ ಗಲಭೆ ಸೇರಿದಂತೆ ಇತರ ಸಂಘರ್ಷಗಳ ಬಗ್ಗೆ ಜನರ ಅಭಿಪ್ರಾಯಕ್ಕೂ, ಪೊಲೀಸರು ಮತ್ತು ಮಾಧ್ಯಮಗಳು ಅನಿಸಿಕೆಗೂ, ತನಿಖಾ ಸಂಸ್ಥೆಗಳ ವರದಿಗೂ ಹಾಗೂ ನ್ಯಾಯಾಲಯದ ಅಂತಿಮ ತೀರ್ಪಿಗೂ ಬಹಳ ವೈರುಧ್ಯಗಳಿರುತ್ತವೆ. ಆದರೆ, ಘಟನೆಯ ಬಗ್ಗೆ ಸತ್ಯಾಂಶ ಹೊರಬರಬೇಕು. ಇಂತಹ ಗಲಭೆಗಳಿಗೆ ಕುಮ್ಮಕ್ಕು ನೀಡುವವರು ಮತ್ತು ಅದರಿಂದ ರಾಜಕೀಯ ಲಾಭ ಪಡೆಯಲು ಯತ್ನಿಸುವವರನ್ನು ಬಹಿರಂಗಪಡಿಸಬೇಕು. ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಅಲ್ಲದೆ, ಅಮಾಯಕರ ಬಿಡುಗಡೆ ಆಗಬೇಕು. ಇಂತಹ ಕೃತ್ಯಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಮುಗ್ಧರಿದ್ದರೆ, ಅವರ ರಕ್ಷಣೆಗೆ ಕಾನೂನು ರಚಿಸಬೇಕು.
-ಎಚ್.ಎನ್.ನಾಗಮೋಹನ್ ದಾಸ್, ನಿವೃತ್ತ ನ್ಯಾಯಮೂರ್ತಿ

ಡಿ.ಜಿ.ಹಳ್ಳಿ ಘಟನೆಯಲ್ಲಿ ಸರಕಾರ ಹಾಗೂ ಮಾಧ್ಯಮಗಳು ವಿಶ್ವಾಸಾರ್ಹವಾಗಿ ನಡೆದುಕೊಂಡಿಲ್ಲ. ಹೀಗಾಗಿ ಸತ್ಯವನ್ನು ಅರಿಯುವ ಪ್ರಯತ್ನವಾಗಿ ಸತ್ಯಶೋಧನಾ ಸಮಿತಿ ಬುಧವಾರ ತನ್ನ ವರದಿ ಬಿಡುಗಡೆ ಮಾಡಿದೆ. ಮುಖ್ಯವಾಗಿ ಅಂದು ನಡೆದಿರುವುದು ಕೋಮುಗಲಭೆ ಅಲ್ಲ. ಒಬ್ಬ ಸಂಘರ್ಷಕ್ಕೆ ಪ್ರಚೋದನೆ ನೀಡಿದರೆ, ಇನ್ನೊಂದು ಗುಂಪು ಆತನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರನ್ನು ಆಗ್ರಹಿಸಿದೆ. ಅಂತಿಮವಾಗಿ ಅದು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಸಂಘರ್ಷವಾಗಿ ಪರಿವರ್ತನೆಯಾಯಿತು. ಸಂಘರ್ಷಕ್ಕೆ ಪ್ರಚೋದನೆ ನೀಡಿದವರು ಮತ್ತು ಪ್ರಚೋದಿತರು ಅಪರಾಧಿಗಳೇ. ನಾಗರಿಕ ಮಾರ್ಗದಲ್ಲಿ ಪ್ರತಿಭಟನೆ ನಡೆಸುವುದು ಅತ್ಯಗತ್ಯ. ಹಿಂಸಾಚಾರಕ್ಕೆ ಇಳಿಯುವುದು ಸಲ್ಲ. ಗಲಭೆಯನ್ನು ತಡೆಗಟ್ಟುವಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ.
-ಅಬ್ದುಸ್ಸಲಾಂ ಪುತ್ತಿಗೆ, ಪ್ರಧಾನ ಸಂಪಾದಕರು, ವಾರ್ತಾಭಾರತಿ ಪತ್ರಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News