ಕೃಷಿ ಮಸೂದೆಗೆ ಬಿಜೆಪಿ ಮಿತ್ರಪಕ್ಷ ವಿರೋಧ: ಸದಸ್ಯರಿಗೆ ವಿಪ್

Update: 2020-09-17 03:50 GMT
ಫೈಲ್ ಚಿತ್ರ

ಚಂಡೀಗಢ, ಸೆ.17: ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿ ವಿಧೇಯಕಗಳನ್ನು ಮಂಡಿಸುವ ವೇಳೆ ಅದನ್ನು ವಿರೋಧಿಸುವಂತೆ ಸೂಚಿಸಿ ಬಿಜೆಪಿ ಮಿತ್ರಪಕ್ಷವಾದ ಶಿರೋಮಣಿ ಅಕಾಲಿದಳ ತನ್ನ ಎಲ್ಲ ಸದಸ್ಯರಿಗೆ ವಿಪ್ ಜಾರಿಗೊಳಿಸಿದೆ.

ಪಕ್ಷದ ಮುಖ್ಯ ಸಚೇತಕ ನರೇಶ್ ಗುಜ್ರಾಲ್ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದಾರೆ. ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ-2020, ಕೃಷಿ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ-2020 ಮತ್ತು ಬೆಲೆ ಖಾತರಿ ಮತ್ತು ಕೃಷಿ ಸೇವೆಗೆ ಸಂಬಂಧಿಸಿದ ರೈತರ (ಸಬಲೀಕರಣ ಮತ್ತು ರಕ್ಷಣೆ) ಮಸೂದೆ-2020ನ್ನು ವಿರೋಧಿಸುವಂತೆ ವಿಪ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಪಕ್ಷದ ಮುಖಂಡ ಹಾಗೂ ಫತೇಪುರ ಸಂಸದ ಸುಖ್ಬೀರ್ ಸಿಂಗ್ ಬಾದಲ್ ಕೂಡಾ ಮಂಗಳವಾರ ಲೋಕಸಭೆಯಲ್ಲಿ ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ-2020ರ ವಿರುದ್ಧ ಮತ ಚಲಾಯಿಸಿದ್ದರು. ಪಕ್ಷ ರಾಜ್ಯಸಭೆಯಲ್ಲಿ ಮೂವರು ಸದಸ್ಯರನ್ನು ಹೊಂದಿದ್ದು, ನರೇಶ್ ಗುಜ್ರಾಲ್, ಬಲ್ವಿಂದರ್ ಸಿಂಗ್ ಭೂಂದೇರ್‌ಹಾಗೂ ಸುಖದೇವ್ ಸಿಂಗ್ ದಿಂಡ್ಸಾ ಪೈಕಿ ದಿಂಡ್ಸಾ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ವರ್ಷದ ಜುಲೈನಲ್ಲಿ ಅವರು ಮತ್ತೊಂದು ಹೊಸ ಪಕ್ಷಕ್ಕೆ ಚಾಲನೆ ನೀಡಿದ್ದರು.

ಪಂಜಾಬ್‌ನ ಮಾಜಿ ಹಣಕಾಸು ಸಚಿವ ಪರಮೀಂದರ್ ಸಿಂಗ್ ಧಿಂಡ್ಸಾ ಅವರ ಪುತ್ರ ಸುಖದೇವ್ ಸಿಂಗ್ ಧಿಂಡ್ಸಾ ಅವರನ್ನು ಕಳೆದ ಫೆಬ್ರುವರಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಅಮಾನತುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News