ಕೊರೋನ ಸೋಂಕಿತರಿಗೆ ಶೇ.50ರಷ್ಟು ಹಾಸಿಗೆ ನೀಡದ 36 ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್

Update: 2020-09-17 12:34 GMT

ಬೆಂಗಳೂರು, ಸೆ.17: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ಸೋಂಕಿತರ ಚಿಕಿತ್ಸೆಗೆ ಶೇ.50ರಷ್ಟ್ಟು ಹಾಸಿಗೆ ನೀಡದ 36 ಆಸ್ಪತ್ರೆಗಳಿಗೆ ಬಿಬಿಎಂಪಿ ಅಂತಿಮ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.

ಮುಂದಿನ 48 ಗಂಟೆಗಳಲ್ಲಿ ಹಾಸಿಗೆ ಬಿಟ್ಟುಕೊಡದಿದ್ದರೆ ಪರವಾನಗಿ ರದ್ದುಗೊಳಿಸುವುದಾಗಿ ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ಸೋಂಕಿತರ ಚಿಕಿತ್ಸೆಗೆ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಬಿಟ್ಟುಕೊಡುವಂತೆ ಸರಕಾರ ನಿರ್ದೇಶನ ನೀಡಿತ್ತು. ಬಿಬಿಎಂಪಿಯಿಂದ ಹಾಸಿಗೆ ಮಾಹಿತಿ ಹಾಗೂ ಸರಕಾರಕ್ಕೆ ಹಾಸಿಗೆ ಬಿಟ್ಟುಕೊಡುವಂತೆ ಸೂಚನೆ ನೀಡಲಾಗಿತ್ತು. ಆದರೆ, ಆಸ್ಪತ್ರೆಗಳು ಪಾಲಿಕೆ ಹಾಗೂ ಸರಕಾರದಿಂದ ಶಿಫಾರಸ್ಸು ಮಾಡುವ ಸೋಂಕಿತರ ಚಿಕಿತ್ಸೆಗೆ ಸಹಕರಿಸದ ಹಿನ್ನೆಲೆಯಲ್ಲಿ ಕೊನೆಯ ಶೋಕಾಸ್ ನೋಟಿಸ್ ನೀಡಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್(ಎಸ್‍ಎಎಸ್‍ಟಿ) ಪೋರ್ಟಲ್‍ನಲ್ಲಿ ಮಾಹಿತಿ ನೀಡದಿರುವ ಕುರಿತು ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದ್ದು, ಇದಕ್ಕೂ ಸ್ಪಂದಿಸದಿದ್ದಲ್ಲಿ ಕ್ರಮ ಜರುಗಿಸುವುದಾಗಿ ತಿಳಿಸಲಾಗಿದೆ.

ಕೊರೋನ ಸೋಂಕಿತರ ಚಿಕಿತ್ಸೆಗೆ 50 ಶೇ. ಹಾಸಿಗೆಗಳನ್ನು ಮೀಸಲಿಡುವುದಕ್ಕೆ ಸಂಬಂಧಿಸಿ ಸರಕಾರದ ನಿಯಮ ಉಲ್ಲಂಘಿಸಿದ ಬೆಂಗಳೂರಿನ 36 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಕೊರೋನ ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡುವುದು ಕಡ್ಡಾಯ. ಸರ್ಕಾರದ ನಿಯಮ ಉಲ್ಲಂಘಿಸಿ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿರುವ ಬೆಂಗಳೂರಿನ 36 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಕಾನೂನು ಉಲ್ಲಂಘಿಸುವ ಆಸ್ಪತೆಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News