''ಪ್ರಾದೇಶಿಕ ಭಾಷೆಗಳಿಗೆ ಹಿಂದಿಯಷ್ಟೇ ಸ್ಥಾನಮಾನ ನೀಡಲು ಸಾಂವಿಧಾನಿಕ ತಿದ್ದುಪಡಿ ಮಾಡದಿರುವುದು ಭಾಷಾ ತಿರಸ್ಕಾರ''

Update: 2020-09-17 11:28 GMT

ಬೆಂಗಳೂರು, ಸೆ.17: ಸಂವಿಧಾನವನ್ನು ಬದಲಿಸುವ ಮಾತನಾಡುವ ಬಿಜೆಪಿ ನಾಯಕರು ಕನ್ನಡ ಮತ್ತು ಇತರ ಭಾಷೆಗಳಿಗೆ ಹಿಂದಿಯಷ್ಟೇ ಸ್ಥಾನಮಾನ ನೀಡಲು ಸಾಂವಿಧಾನಿಕ ತಿದ್ದುಪಡಿ ತರಲು ಪ್ರಯತ್ನಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳಿಗೆ ಹಿಂದಿಯಷ್ಟೇ ಸ್ಥಾನಮಾನ ನೀಡಲು ಸಾಂವಿಧಾನಿಕ ತಿದ್ದುಪಡಿ ತರಲಾಗುವುದೇ ಎಂಬ ಪ್ರಶ್ನೆಗೆ ಕೇಂದ್ರ ಇಲ್ಲವೆಂದಿದೆ. ಇದು ಭಾಷಾ ತಿರಸ್ಕಾರದ ಸಂಕೇತ.

ಆದರೆ ಹಿಂದಿಯಂತೆ ಕನ್ನಡವೂ ದೇಶದ ಅಧಿಕೃತ ಭಾಷೆ. ಕನ್ನಡ ರಾಷ್ಟ್ರಭಾಷೆಯೇ. ಕೇಂದ್ರ ಸರಕಾರಿ ಆಡಳಿತದಲ್ಲಿ ಕನ್ನಡ ಸೇರಿ ಇತರ ಭಾಷೆಗಳನ್ನು ಸೇರಿಸಬೇಕಷ್ಟೇ ಎಂದು ಹೇಳಿದ್ದಾರೆ.

ಸಂವಿಧಾನದ ಪರಿಚ್ಛೇದ 343, 344, 345ರಲ್ಲಿ ಹಿಂದಿಗೆ ಉತ್ತೇಜನ ನೀಡುವ ಅಂಶಗಳಿವೆ. ಇದೇ ನೆಪದಲ್ಲಿ ಹಿಂದಿ ಹೇರುವ ಪ್ರಯತ್ನ ಕೇಂದ್ರ ಸರಕಾರಗಳಿಂದ ನಿರಂತರವಾಗಿ ನಡೆದಿದೆ. ಸಂವಿಧಾನವನ್ನು ಬದಲಿಸುವ ಮಾತನಾಡುವ ಬಿಜೆಪಿ ನಾಯಕರು ಕನ್ನಡ ಮತ್ತು ಇತರ ಭಾಷೆಗಳಿಗೆ ಹಿಂದಿಯಷ್ಟೇ ಸ್ಥಾನಮಾನ ನೀಡಲು ಸಾಂವಿಧಾನಿಕ ತಿದ್ದುಪಡಿ ತರಲು ಪ್ರಯತ್ನಿಸಲಿ ಎಂದು ಸವಾಲೆಸೆದಿದ್ದಾರೆ.

ಇತರ ಭಾಷೆಗಳಿಗೆ ಹಿಂದಿಯಷ್ಟು ಸ್ಥಾನಮಾನ ನೀಡಲು ನಿರಾಕರಿಸುತ್ತಿರುವ ಕೇಂದ್ರ ಸರಕಾರ ಮತ್ತು ಅದರ ನೇತೃತ್ವ ವಹಿಸಿರುವ ಬಿಜೆಪಿ, ಹಿಂದಿಯೇತರ ರಾಜ್ಯಗಳ, ಹಿಂದಿಯೇತರ ಭಾಷಿಕರ ಸಂಸದರನ್ನೂ ಒಳಗೊಂಡು ಸರಕಾರ ರಚಿಸಿದೆ ಎಂಬುದು ನೆನಪಿರಲಿ. ಎಲ್ಲ ಅಧಿಕೃತ ಭಾಷೆಗಳನ್ನು ಆಡಳಿತದಲ್ಲಿ ಜಾರಿಗೆ ತಂದು ಅವರೆಲ್ಲರ ಋಣ ತೀರಿಸುವುದು ಬಿಜೆಪಿಯ ಕರ್ತವ್ಯ ಎಂದವರು ಹೇಳಿದ್ದಾರೆ.

ಕೇಂದ್ರ ಸರಕಾರದ ಅಧಿಸೂಚನೆ, ಪ್ರಕಟನೆಗಳು ಇತರ ಅಧಿಕೃತ ಭಾಷೆಗಳಲ್ಲಿಯೂ ಇರಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚಿಗೆ ಪ್ರಕರಣವೊಂದರ ವಿಚಾರಣೆ ವೇಳೆ ಕೇಂದ್ರಕ್ಕೆ ಸೂಚನೆ ನೀಡಿದೆ. ಅಲ್ಲದೇ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ, ಎಲ್ಲ ಭಾಷೆಗಳೂ ಸರಿಸಮಾನ ಎಂಬುದನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಕೋವಿಡ್, ಚೀನಾ ತಂಟೆ, ಆರ್ಥಿಕತೆ ಕುಸಿತ, ನಿರುದ್ಯೋಗದಂಥ ಸಮಸ್ಯೆ ಮೆಟ್ಟಿನಿಲ್ಲುವ ಸಾಮರ್ಥ್ಯವನ್ನು ಭಗವಂತ ಕರುಣಿಸಲಿ ಎಂಬ ಜನಾಶಯದ ಹಾರೈಕೆಯು ನನ್ನದು ಕೂಡ. ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ನಿಮಗೆ ಆಯುರಾರೋಗ್ಯ ದಯಪಾಲಿಸಲೆಂದು ನಾನು ಈ ಸಂದರ್ಭದಲ್ಲಿ ಕೋರುತ್ತೇನೆ

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News