ಸರಕಾರ ವಲಸೆ ಕಾರ್ಮಿಕರ ಸಾವಿನ ಕುರಿತು ಮಾಹಿತಿ ಸಂಗ್ರಹಿಸಿತ್ತು: ಆರ್ ಟಿಐ ಅರ್ಜಿಯಿಂದ ಬಹಿರಂಗ

Update: 2020-09-17 09:12 GMT

ಹೊಸದಿಲ್ಲಿ: ಸೋಮವಾರ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್, ಲಾಕ್ ಡೌನ್ ವೇಳೆ ತಮ್ಮ ಊರುಗಳಿಗೆ ಮರಳುತ್ತಿದ್ದ ವೇಳೆ ಮೃತಪಟ್ಟ ವಲಸಿಗ ಕಾರ್ಮಿಕರ ಕುರಿತಾದ ಯಾವುದೇ ದಾಖಲೆಗಳು ಸರಕಾರದ ಬಳಿಯಿಲ್ಲ ಎಂದು ಹೇಳಿದ್ದರು. ನಂತರ ಈ ಹೇಳಿಕೆ ವ್ಯಾಪಕ ಟೀಕೆಗೂ ಗುರಿಯಾಗಿತ್ತು.

ಆದರೆ ವಾಸ್ತವವಾಗಿ ಸರಕಾರ ವಲಸಿಗ ಕಾರ್ಮಿಕರ ಸಾವು ಕುರಿತಂತೆ ದಾಖಲೆಗಳನ್ನು ಹೊಂದಿದೆ ಎಂದು thewire.in ಆರ್‍ ಟಿಐ ಮೂಲಕ ಪಡೆದ ಮಾಹಿತಿಯಿಂದ ತಿಳಿದು ಬಂದಿದೆ.

ಭಾರತೀಯ ರೈಲ್ವೆಯ 18 ವಲಯಗಳಲ್ಲಿ ಸಲ್ಲಿಸಲಾಗಿದ್ದ ಆರ್‍ ಟಿಐ ಅರ್ಜಿಗಳಿಗೆ ದೊರೆತ ಉತ್ತರದಲ್ಲಿ ಶ್ರಮಿಕ್ ವಿಶೇಷ ರೈಲುಗಳಲ್ಲಿ ಕನಿಷ್ಠ 80 ಜನರು ಮೃತರಾಗಿರುವುದು ದೃಢಪಟ್ಟಿದೆ.  ಹೀಗೆ ಮೃತಪಟ್ಟವರಲ್ಲಿ  ಕನಿಷ್ಠ ಎರಡು ನವಜಾತ ಶಿಶುಗಳು ಹಾಗೂ ಒಬ್ಬ 85 ವರ್ಷದ ವೃದ್ಧರು ಸೇರಿದ್ದಾರೆ.

ಶ್ರಮಿಕ್ ವಿಶೇಷ ರೈಲುಗಳಲ್ಲಿ ಸಂಭವಿಸಿದ ಸಾವುಗಳನ್ನು ರೈಲ್ವೆ ರಕ್ಷಣಾ ದಳ ದಾಖಲಿಸಿಕೊಂಡಿತ್ತು ಹಾಗೂ ಸಂಬಂಧಿತ ರೈಲ್ವೆ ವಲಯಕ್ಕೆ ಈ ಮಾಹಿತಿ ರವಾನಿಸಿತ್ತು ಎಂದು thewire.in ಆರ್‍ಟಿಐ ಮಾಹಿತಿ ಮೂಲಕ ಕಂಡುಕೊಂಡಿದೆ.

ಹೀಗೆ ಮೃತಪಟ್ಟವರಲ್ಲಿ ಹಲವರಿಗೆ ಕೋವಿಡ್ ಸೋಂಕು ಇತ್ತು ಹಾಗೂ ಇತರರು ಸೋಂಕಿನ ಲಕ್ಷಣಗಳಾದ ಕೆಮ್ಮು, ಜ್ವರ, ವಾಂತಿ ಮುಂತಾದ ಲಕ್ಷಣಗಳನ್ನು ಹೊಂದಿದ್ದರು ಹಾಗೂ ಅವರ ಸ್ಥಿತಿ ದಿಢೀರನೇ ಬಿಗಡಾಯಿಸಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಹಲವು ಪ್ರಕರಣಗಳಲ್ಲಿ ಕುಟುಂಬ ಸದಸ್ಯರ ಒತ್ತಾಯದ ಮೇರೆಯೂ ಪೋಸ್ಟ್ ಮಾರ್ಟಂ ನಡೆಸಲಾಗಿಲ್ಲ ಎಂಬ ಮಾಹಿತಿಯೂ ಇದೆ.

ಭಾರತೀಯ ರೈಲ್ವೆಯ 18 ವಲಯಗಳಲ್ಲಿ 70 ವಿಭಾಗಗಳಿದ್ದು ಇವುಗಳ ಪೈಕಿ 14 ವಿಭಾಗಗಳು ಮಾತ್ರ ಮಾಹಿತಿ ನೀಡಿದ್ದು, ಇವುಗಳು ನೀಡಿದ ಮಾಹಿತಿ ಪ್ರಕಾರ ಕನಿಷ್ಠ 80 ಜನರು ಮೃತಪಟ್ಟಿದ್ದಾರೆ. ಇತರ ವಿಭಾಗಗಳೂ ಮಾಹಿತಿ ನೀಡಿದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News