ಡ್ರಗ್ಸ್ ಹಗರಣದ ನ್ಯಾಯಾಂಗ ತನಿಖೆಯಾಗಲಿ: ಸಿದ್ದರಾಮಯ್ಯ ಒತ್ತಾಯ

Update: 2020-09-17 13:38 GMT

ಬೆಂಗಳೂರು, ಸೆ.17: ಡ್ರಗ್ಸ್ ಹಗರಣದಲ್ಲಿ ಪೊಲೀಸರು ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಪ್ರಮುಖ ಆರೋಪಿಗಳನ್ನು ಬಂಧಿಸದಂತೆ ಸರಕಾರ ಒತ್ತಡ ಹೇರುತ್ತಿದೆ. ಆದುದರಿಂದ, ಇಡೀ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದು ಸೂಕ್ತ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಇಂದು ಪ್ರಧಾನಿ ನರೇಂದ್ರ ಮೋದಿಯ ಹುಟ್ಟುಹಬ್ಬ. ಅವರಿಗೆ ನಾನು ಶುಭಾಶಯ ಕೋರುತ್ತೇನೆ. ಹುಟ್ಟುಹಬ್ಬಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹೀರಾತು ನೀಡಲಾಗಿದೆ. ಮೋದಿಯವರು ಭಾರೀ ಸಾಧನೆ ಮಾಡಿದ್ದಾರೆ ಎಂದು ಜಾಹೀರಾತಿನಲ್ಲಿ ಬಿಂಬಿಸಲಾಗಿದೆ ಎಂದು ಅವರು ಟೀಕಿಸಿದರು.

ನಿರುದ್ಯೋಗ ದಿನಾಚರಣೆಗೆ ಬೆಂಬಲ: ಮೋದಿ ಪ್ರಧಾನಿಯಾದ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ನೋಟು ಅಮಾನ್ಯ, ಅವೈಜ್ಞಾನಿಕ ಜಿ.ಎಸ್.ಟಿ ಹಾಗೂ ಕೆಟ್ಟ ಹಣಕಾಸು ನೀತಿಯಿಂದಾಗಿ ದೇಶ ಆರ್ಥಿಕವಾಗಿ ಭಾರೀ ಕೆಳಮಟ್ಟಕ್ಕೆ ಹೋಗಿದೆ. ಜಿಡಿಪಿಯೂ ಭಾರಿ ಕುಸಿತ ಕಂಡಿದೆ. ಇದರಿಂದ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ದೇಶದ ಸಂಪತ್ತು ಬೆಳವಣಿಗೆಯಾದಾಗ ಮಾತ್ರ ಉದ್ಯೋಗ ದೊರೆಯಲು ಸಾಧ್ಯ. ಕೃಷಿ ವಲಯ ಹೊರತುಪಡಿಸಿ ಬೇರೆ ಎಲ್ಲ ಕ್ಷೇತ್ರಗಳ ಬೆಳವಣಿಗೆ ನಕಾರಾತ್ಮಕವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಹೊಸದಾಗಿ ಉದ್ಯೋಗ ಕೊಡುವುದಿರಲಿ, ಇರುವ ಉದ್ಯೋಗಗಳೂ ಕಡಿತವಾಗುತ್ತಿವೆ. ಸೂಕ್ಷ್ಮ, ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮುಚ್ಚಿವೆ. ನಿರುದ್ಯೋಗ ಪ್ರಮಾಣ ಭಾರೀ ಎತ್ತರಕ್ಕೆ ಹೋಗಿದೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಪ್ರಧಾನಿ ನೀಡಿದ್ದ ಭರವಸೆ ಹುಸಿಯಾಗಿದೆ. ಸ್ವಾಮಿನಾಥನ್ ವರದಿ ಜಾರಿಯಾಗದ ಪರಿಣಾಮ ರೈತರೂ ಕಷ್ಟಕ್ಕೆ ಸಿಲುಕಿದ್ದಾರೆ. ನಿರುದ್ಯೋಗದ ಪರಿಣಾಮ ಯುವಕರು ಜೀವನವೇ ಬೇಡ ಎನ್ನುವ ಹಂತ ತಲುಪಿದ್ದಾರೆ ಎಂದು ಅವರು ತಿಳಿಸಿದರು.

ನರೇಂದ್ರ ಮೋದಿ ಭಾರೀ ಬದಲಾವಣೆ ತರಲಿದ್ದಾರೆ ಎಂದು ಯುವಕ, ಯುವತಿಯರು ಅವರನ್ನು ಬೆಂಬಲಿಸಿದರು. ಆದರೆ ಈಗ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ ಅವರು ಮೋದಿ ಹುಟ್ಟುಹಬ್ಬವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿರುವುದು ಸರಿಯಾಗಿದೆ. ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಈಗ 51 ಲಕ್ಷ ಮೀರಿದೆ. ಸೋಂಕಿನಲ್ಲಿ ಭಾರತ ಜಗತ್ತಿನಲ್ಲೇ ಎರಡನೇ ಸ್ಥಾನಕ್ಕೆ ಬಂದಿದೆ. ಇದು ಕೇಂದ್ರದ ಬಿಜೆಪಿ ಸರಕಾರದ ಸಾಧನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಬ್ಬರು ಮುಖ್ಯಮಂತ್ರಿಗಳು: ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಇದ್ದಾರೆ. ಯಡಿಯೂರಪ್ಪ ಅವರ ಜೊತೆಗೆ ಪುತ್ರ ವಿಜಯೇಂದ್ರ ಅವರೂ ಪರ್ಯಾಯ ಮುಖ್ಯಮಂತ್ರಿಯಂತೆ ಕೆಲಸ ಮಾಡುತ್ತಿದ್ದಾರೆ. ವೈದ್ಯರ ಜೊತೆ ಸಭೆ ನಡೆಸಲು ಬಿಜೆಪಿಯಲ್ಲಿ ಬೇರೆ ಪದಾಧಿಕಾರಿಗಳು ಇರಲಿಲ್ಲವೇ? ಮಾಧ್ಯಮಗಳು ಜನರ ಧ್ವನಿಯಾಗಿ ಸರಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಹುಳುಕು, ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಬೆಳಕು ಚೆಲ್ಲಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಸರಕಾರ ಇದ್ದಾಗ ಆರಂಭವಾದ ಶಿವಾನಂದ ವೃತ್ತದ ಉಕ್ಕಿನ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. 53 ಸಾವಿರ ಕೋಟಿ ರೂ. ಸಾಲ ಪಡೆಯುವುದಾಗಿ ಸರಕಾರ ಬಜೆಟ್‍ನಲ್ಲಿ ಹೇಳಿದೆ. ಇದರ ಜೊತೆಗೆ 33 ಸಾವಿರ ಕೋಟಿ ರೂ.ಗಳನ್ನು ಸಾಲವಾಗಿ ಪಡೆಯಲು ನಿರ್ಧರಿಸಿದೆ. ಈ ರೀತಿ ಆದರೆ ರಾಜ್ಯ ಉಳಿಯುವುದೇ? ಕೊನೆಗೆ ಬಡ್ಡಿ, ಸಾಲ ತೀರಿಸಲು ಮಾತ್ರ ಹಣ ಇರುತ್ತದೆಯೇ ಹೊರತು ಅಭಿವೃದ್ಧಿ ಎಂಬುದು ಶೂನ್ಯವಾಗುತ್ತದೆ. ರಸ್ತೆ, ನೀರಾವರಿ, ಸಮಾಜ ಕಲ್ಯಾಣ ಇಲಾಖೆಗೆ ಕೊಡಲು ಅನುದಾನವೇ ಇರುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜನರ ಬಳಿಗೆ ಹೋದರೆ ಏಟು ಖಚಿತ: ಬೆಂಗಳೂರಿನ ಚಿತ್ರಣವನ್ನೇ ಬದಲಾವಣೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಅನುದಾನವೇ ಇಲ್ಲದ ಮೇಲೆ ಚಿತ್ರಣವನ್ನು ಅವರು ಹೇಗೆ ಬದಲಾವಣೆ ಮಾಡುವರೋ ಗೊತ್ತಿಲ್ಲ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯದು. ಏಕೆಂದರೆ ಒಂದು ದಿನವನ್ನೂ ಯಡಿಯೂರಪ್ಪ ವ್ಯರ್ಥ ಮಾಡುವುದಿಲ್ಲ. ಜೊತೆಗೆ ಜನರ ಬಳಿಗೆ ಹೋಗುವುದಿಲ್ಲ. ಮುಖ್ಯಮಂತ್ರಿ, ಮಂತ್ರಿಗಳು ಬೆಂಗಳೂರಿನಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ನೀವು ಜನರ ಬಳಿಗೆ ಹೋಗಿ ಬಡಿಗೆ ತೆಗೆದುಕೊಂಡು ಹೊಡೆಯುತ್ತಾರೆ ಎಂದು ಯಡಿಯೂರಪ್ಪ ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ನಮಗೆ ಹೇಳುತ್ತಿದ್ದರು. ಆದರೆ ನಮಗೆ ಯಾರೂ ಹೊಡೆಯಲಿಲ್ಲ. ಈಗ ಆಡಳಿತ ನಡೆಸುತ್ತಿರುವವರು ಏನಾದರೂ ಜನರ ಬಳಿಗೆ ಹೋದರೆ ಬಡಿಗೆ ಏಟು ಬೀಳುವುದು ಖಚಿತ ಎಂದು ಅವರು ತಿರುಗೇಟು ನೀಡಿದರು.

ಬೆಂಗಳೂರಿನ ಜನಸಂಖ್ಯೆ 1.10 ಕೋಟಿ. ಕೇವಲ ವಲಯಗಳನ್ನು ಮಾಡಿ ಆಯುಕ್ತರ ಹುದ್ದೆಯನ್ನು ಮುಖ್ಯ ಆಯುಕ್ತರ ಹುದ್ದೆ ಎಂದು ಬದಲಾಯಿಸಿದರೆ ಮಹಾನಗರ ಅಭಿವೃದ್ಧಿ ಆಗುವುದೇ? ಪ್ರತಿ ವರ್ಷ ಮಳೆ ಬರುತ್ತದೆ. ಈವರೆಗೆ ರಾಜ ಕಾಲುವೆಗಳ ದುರಸ್ತಿ ಆಗಿಲ್ಲ. ಪಾಲಿಕೆ ಆಸ್ತಿಯನ್ನು ಅಡಮಾನ ಇಟ್ಟವರು ಯಾರು? ಬಿಜೆಪಿಯವರಿಂದ ಬೆಂಗಳೂರು ಅಭಿವೃದ್ಧಿ ಅಸಾಧ್ಯ. ಕೇವಲ ಭಾಷಣ ಮತ್ತು ಭ್ರಷ್ಟಾಚಾರವನ್ನು ಮಾತ್ರ ಅವರಿಂದ ನಿರೀಕ್ಷೆ ಮಾಡಬಹುದು ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News