ಗೋಮಾಂಸ ಮಾರಾಟ ಮಾಡಿದ್ದಕ್ಕೆ ಗುಂಪು ಹಲ್ಲೆ: ಸಂತ್ರಸ್ತನಿಗೆ 1 ಲಕ್ಷ ರೂ. ಪರಿಹಾರ ನೀಡಲು ಎನ್ಎಚ್ಆರ್ ಸಿ ಆದೇಶ

Update: 2020-09-17 11:55 GMT

ಗುವಾಹತಿ: ಕಳೆದ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಅಸ್ಸಾಂನ ಬಿಸ್ವನಾಥ್ ಜಿಲ್ಲೆಯ ವಾರದ ಸಂತೆ ವೇಳೆ ಗೋಮಾಂಸ ಮಾರಾಟ ಮಾಡುತ್ತಿದ್ದಾನೆಂಬ ಶಂಕೆಯಿಂದ ಗುಂಪು ಥಳಿತಕ್ಕೊಳಗಾದ ವ್ಯಕ್ತಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಅಸ್ಸಾಂ ಸರಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.

ನಾಲ್ಕು ವಾರಗಳೊಗಾಗಿ ಪ್ರಕರಣದ ಆರೋಪಿಗಳ ವಿರುದ್ಧದ ವರದಿಯನ್ನು ಕಳುಹಿಸಿಕೊಡದೇ ಇದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಆಯೋಗ ರಾಜ್ಯ ಡಿಜಿಪಿಗೆ ನೀಡಿದೆ.

ವಿಪಕ್ಷ ನಾಯಕ ದೇಬಬೃತ ಸೈಕಿಯಾ ಅವರು ನೀಡಿದ ದೂರನ್ನು ಪರಿಶೀಲಿಸಿದ ಆಯೋಗ ತಾನು ನೀಡಿದ್ದ ಶೋಕಾಸ್ ನೋಟಿಸಿಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪ್ರತಿಕ್ರಿಯಿಸಿಲ್ಲ ಎಂದು ಆಕ್ಷೇಪಿಸಿದೆಯಲ್ಲದೆ ಡಿಜಿಪಿ ಕೂಡ ಪ್ರಕರಣ ಕುರಿತಂತೆ ಕ್ರಮ ಕೈಗೊಂಡ ವರದಿ ಸಲ್ಲಿಸಿಲ್ಲ ಎಂದು ಹೇಳಿದೆ.

ಇದೊಂದು ಮಾನವ ಹಕ್ಕು ಉಲ್ಲಂಘನೆ ಪ್ರಕರಣ ಹಾಗೂ ರಾಜ್ಯ ಸರಕಾರ ಸಂತ್ರಸ್ತನಿಗೆ ಪರಿಹಾರ ನೀಡಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

ಎಪ್ರಿಲ್ 8, 2019ರಂದು ಶೌಕತ್ ಅಲಿ ಎಂಬಾತನಿಗೆ ಬೈಹಾತ ಚರಿಯಾಲಿ ಸಂತೆ ಸಂದರ್ಭ ಗುಂಪು ಹಲ್ಲೆ ನಡೆದಿತ್ತು. ಆತನ  ಹೋಟೆಲಿನಲ್ಲಿ ಗ್ರಾಹಕರಿಗೆ ಆತ ಗೋಮಾಂಸ ಆಹಾರ ನೀಡುತ್ತಿದ್ದ ಎಂಬ ಶಂಕೆಯ ಮೇಲೆ ಹಲ್ಲೆ ನಡೆದಿತ್ತಲ್ಲದೆ ಹಲ್ಲೆಕೋರರು ಆತನಿಗೆ ಹಂದಿ ಮಾಂಸವನ್ನೂ ಬಲವಂತವಾಗಿ ತಿನ್ನಿಸಿದ್ದರು. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ತನ್ನ ಕುಟುಂಬ ಈ ಮಾರುಕಟ್ಟೆಯಲ್ಲಿ ಬೇಯಿಸಿದ ಗೋಮಾಂಸವನ್ನು ಮೂರು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಮಾರಾಟ ಮಾಡುತ್ತಿದ್ದು ಯಾವತ್ತೂ ಇಂತಹ  ಕಿರುಕುಳ ಎದುರಿಸಿರಲಿಲ್ಲ ಎಂದು ಸಂತ್ರಸ್ತ ಹೇಳಿದ್ದ. ಆತನಿಗೆ ಅಲ್ಲಿ ಅಂಗಡಿ ಹಾಕಲು ಅನುಮತಿಸಿದ್ದ ಮಾರುಕಟ್ಟೆಯ ಗುತ್ತಿಗೆದಾರನ ಮೇಲೆಯೂ ಹಲ್ಲೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News