ಉದ್ಯೋಗ ಕೈ ತಪ್ಪಿದ್ದರಿಂದ ಗಾಂಜಾ ಮಾರಾಟಕ್ಕಿಳಿದ ಎಂಬಿಎ ಪದವೀಧರ

Update: 2020-09-17 12:31 GMT

ಬೆಂಗಳೂರು, ಸೆ.17: ಲಾಕ್‍ಡೌನ್ ಸಂದರ್ಭದಲ್ಲಿ ಉದ್ಯೋಗ ಕೈ ತಪ್ಪಿದ ಎಂಬಿಎ ಪದವೀಧರನೋರ್ವ ಗಾಂಜಾ ಮಾರಾಟ ಜಾಲದಲ್ಲಿ ಸಕ್ರಿಯವಾಗಿದ್ದ ಪ್ರಕರಣವೊಂದನ್ನು ಇಲ್ಲಿನ ಪೀಣ್ಯ ಠಾಣಾ ಪೊಲೀಸರು ಭೇದಿಸಿದ್ದಾರೆ.

ಒರಿಸ್ಸಾದ ಕಲಾಂಡಿ ಜಿಲ್ಲೆಯ ನಿವಾಸಿ ತುಷಾರ್ ಪಟ್ನಾಯಕ್(25), ಮೈಸೂರು ರಸ್ತೆಯ ಶಾಮಣ್ಣನಗರ ನಿವಾಸಿ ಹಬೀಬುಲ್ಲಾ ಖಾನ್(44) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಪೀಣ್ಯದ ಸುವರ್ಣನಗರ, ಕಾರ್ಲೆ ಫ್ಯಾಕ್ಟರಿಯ ಹತ್ತಿರ ಬುಧವಾರ ಇಬ್ಬರು ಅಪರಿಚಿತರು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೀಣ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, 4.3 ಕೆ.ಜಿ.ತೂಕದ ಗಾಂಜಾ ಮಾದಕ ವಸ್ತು ಮತ್ತು 2000 ರೂ.ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪದವೀಧರ: ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ತುಷಾರ್ ಪಟ್ನಾಯಕ್ ಮೂರು ವರ್ಷಗಳ ಹಿಂದೆ ಒಡಿಸ್ಸಾದಿಂದ ಬೆಂಗಳೂರಿಗೆ ಎಂಬಿಎ ವ್ಯಾಸಂಗಕ್ಕೆ ಬಂದಿದ್ದು, ವ್ಯಾಸಂಗ ಮುಗಿಸಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಆದರೆ, ಲಾಕ್ ಡೌನ್ ಸಮಯದಲ್ಲಿ ಕೆಲಸದಿಂದ ತೆಗೆದು ಹಾಕಿದಾಗ ಆರೋಪಿ ಕೋಲಾರ ಜಿಲ್ಲೆಯ ಮಾಲೂರಿನ ವ್ಯಕ್ತಿಯೊಬ್ಬರಿಂದ ಗಾಂಜಾ ಪಡೆದುಕೊಂಡು ಸೇವನೆ ಮಾಡುವಾಗ ಆತನೊಂದಿಗೆ ಪರಿಚಯವಾಗಿದೆ. ಕೆಲಸವಿಲ್ಲದ್ದರಿಂದ ಹಣಕ್ಕಾಗಿ ಹಾಗೂ ಸುಲಭವಾಗಿ ಹೆಚ್ಚು ಹಣ ಗಳಿಸಬಹುದೆಂದು ಪುನಃ ಆತನಿಂದ ಗಾಂಜಾ ಪಡೆದು ಮಾರಾಟಕ್ಕೆ ಮುಂದಾಗಿದ್ದಾನೆ. ಇನ್ನು, ಕೆಲಸದ ನಿಮಿತ್ತ ಬಾಡಿಗೆಗೆ ಆಟೊ ಉಪಯೋಗಿಸುತ್ತಿದ್ದ ವೇಳೆ ಪರಿಚಯವಾದ ಹಬೀಬುಲ್ಲಾ ಖಾನ್‍ನನ್ನು ಜತೆಗೂಡಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News