ಕೊಲೆ ಯತ್ನ ಆರೋಪಿಯನ್ನು ಗುಂಡಿಕ್ಕಿ ಬಂಧಿಸಿದ ಪೊಲೀಸರು

Update: 2020-09-17 13:19 GMT

ಬೆಂಗಳೂರು, ಸೆ.17: ಕೊಲೆ ಯತ್ನ ಆರೋಪ ಸಂಬಂಧ ವ್ಯಕ್ತಿಯೋರ್ವನ ಕಾಲಿಗೆ ಡಿಜೆಹಳ್ಳಿ ಠಾಣಾ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರೇಮ್ ಕುಮಾರ್(30) ಬಂಧಿತ ಆರೋಪಿಯಾಗಿದ್ದು, ಪೊಲೀಸರು ಹಾರಿಸಿದ ಗುಂಡೇಟು ಎಡಗಾಲಿಗೆ ತಗುಲಿ ಗಾಯಗೊಂಡಿರುವ ಈತನನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿಪಿ ಡಾ. ಎಸ್.ಡಿ.ಶರಣಪ್ಪ ತಿಳಿಸಿದರು.

ಗುರುವಾರ ಆರೋಪಿ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್.ಆರ್. ಬಂಡೆ ಸಮೀಪ ಇರುವ ಮಾಹಿತಿ ಮೇರೆಗೆ ಪಿಎಸ್‍ಐ ನಾಗದೇವ್, ಹೆಡ್‍ಕಾನ್‍ಸ್ಟೇಬಲ್ ರಂಗನಾಥ್ ಮತ್ತವರ ಸಿಬ್ಬಂದಿ ಮುಂಜಾನೆ ಆರೋಪಿಯನ್ನು ಬಂಧಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರೇಮ್‍ಕುಮಾರ್ ಹೆಡ್‍ಕಾನ್‍ಸ್ಟೇಬಲ್ ರಂಗನಾಥ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಎಸ್ಸೈ ನಾಗದೇವ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರು. ಆರೋಪಿ ಪರಾರಿಯಾಗಲು ಯತ್ನಿಸಿದಾಗ ಆತ್ಮ ರಕ್ಷಣೆಗಾಗಿ ಆತನ ಎಡಗಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ.

ಸೆ. 8ರಂದು ಡಿ.ಜೆ.ಹಳ್ಳಿಯ ಕೆಎಚ್‍ಬಿ ಮುಖ್ಯ ರಸ್ತೆಯಲ್ಲಿರುವ ಮದ್ಯದಂಗಡಿಯಲ್ಲಿ ದೀಪಕ್, ಕಪಿಲ್, ಶಿವ ಮತ್ತು ಪ್ರೇಮ್‍ಕುಮಾರ್ ಅವರ ನಡುವೆ ಮದ್ಯದ ಅಮಲಿನಲ್ಲಿ ಜಗಳ ನಡೆದಿದ್ದು, ಪರಸ್ಪರ ಮಾತಿಗೆ ಮಾತು ಬೆಳೆದು ಪ್ರೇಮ್‍ಕುಮಾರ್ ಮತ್ತು ಶಿವ, ದೀಪಕ್ ಹಾಗೂ ಕಪಿಲ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡ ಡಿ.ಜೆ.ಹಳ್ಳಿ ಪೊಲೀಸರು ಬುಧವಾರ ರಾತ್ರಿ ಆರೋಪಿ ಶಿವ ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದರು.

ಈ ಸಂದರ್ಭದಲ್ಲಿ ಶಿವ ಮತ್ತೊಬ್ಬ ಆರೋಪಿ ಬಗ್ಗೆ ನೀಡಿದ ಮಾಹಿತಿ ಮೇರೆಗೆ ಇಂದು ಮುಂಜಾನೆ ಪ್ರೇಮ್‍ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News