ಮಾದಕ ವಸ್ತು ಜಾಲ ಭೇದಿಸಿದ ಸಿಸಿಬಿ: 50 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ

Update: 2020-09-17 13:22 GMT

ಬೆಂಗಳೂರು, ಸೆ.17: ಮಾದಕ ವಸ್ತು ಮಾರಾಟಗಾರರ ಬೃಹತ್ ಜಾಲವೊಂದನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ 50 ಲಕ್ಷ ಮೌಲ್ಯದ 90 ಕೆ.ಜಿ.ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಡುಗೋಡಿ ಬೆಳತ್ತೂರು ಕಾಲನಿಯ ಆಝಾಮ್ ಪಾಷ(25), ಬೆಳತ್ತೂರು ಅಯ್ಯಪ್ಪ ದೇವಸ್ಥಾನದ ರಸ್ತೆ ನಿವಾಸಿ ಮಸ್ತಾನ್ ವಾಲಿ(25) ಹೊಸಕೋಟೆಯ ಎಆರ್ ಎಕ್ಸ್‍ಟೆನ್ಷನ್‍ನ ಮುಹಮ್ಮದ್ ಅಬ್ಬಾಸ್(27) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ನಗರವನ್ನು ಮಾದಕವಸ್ತು ಮುಕ್ತ ನಗರವಾಗಿ ಮಾಡುವ ಉದ್ದೇಶದಿಂದ ಡ್ರಗ್ಸ್ ಸೇವನೆ, ಅಕ್ರಮ ಸಾಗಾಟ, ಸರಬರಾಜು, ಮಾರಾಟಗಾರರ ವಿರುದ್ಧ ಸಿಸಿಬಿ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಅದರ ಭಾಗವಾಗಿ, ಕಾಡುಗೋಡಿಯ ದೊಡ್ಡ ಬನಹಳ್ಳಿಯ ಸಫಲ್ ಮಾರ್ಕೆಟ್ ಹಿಂಭಾಗದ ವಿಂಧ್ಯಗಿರಿ ಬಿಡಿಎ ಅಪಾರ್ಟ್‍ಮೆಂಟ್ 13ನೇ ಮಹಡಿಯ ಫ್ಲಾಟ್ ನಂ.1302ನಲ್ಲಿ ವಾಸವಾಗಿರುವ ಆಝಾಮ್ ಪಾಷ ಎಂಬಾತ ತನ್ನ ಸಹಚರರಾದ ಮಸ್ತಾನ್ ವಾಲಿ, ಮುಹಮ್ಮದ್ ಅಬ್ಬಾಸ್, ಅಪ್ಪು ಎಂಬವರ ಜೊತೆ ಸೇರಿಕೊಂಡು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ನೂರಾರು ಕೆ.ಜಿ.ಗಾಂಜಾ ಖರೀದಿಸಿಕೊಂಡು ಬಂದು ತನ್ನ ಫ್ಲಾಟ್‍ನಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಎಂಬ ನಿಖರ ಮಾಹಿತಿ ಪಡೆದು ಸೆ.9ರಂದು  ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News