ಕೋವಿಡ್ ನಿರ್ವಹಣೆಯಲ್ಲಿ ಬಲಿಷ್ಠ ದೇಶಗಳು ಸೋತರೂ ಭಾರತ ಗೆದ್ದಿತು: ಡಿಸಿಎಂ ಅಶ್ವತ್ಥ ನಾರಾಯಣ

Update: 2020-09-17 14:29 GMT

ಬೆಂಗಳೂರು, ಸೆ.17: ಪ್ರಧಾನಿ ನರೇಂದ್ರ ಮೋದಿ ಜಾತಿ ಮತ ಎಲ್ಲವನ್ನೂ ಮೀರಿದ ವಿಶ್ವನಾಯಕ. ಅವರ ಮಾರ್ಗದರ್ಶನದಲ್ಲಿ ನಡೆಯುವುದು ಎಂದರೆ ಹೆಮ್ಮೆಯ ಸಂಗತಿ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಗುರುವಾರ ನಗರದ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಘಟಕ ಹಾಗೂ ಮೋದಿ ಬ್ರಿಗೇಡ್ ಪ್ರತಿಷ್ಠಾನ, ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದ ಅವರು, ಇವತ್ತು ಭಾರತ ಜಗತ್ತಿನ ಅತ್ಯಂತ ಪ್ರಬಲ ದೇಶವಾಗಿ ಹೊರಹೊಮ್ಮಿದೆ. ಇದಕ್ಕೆ ಮೋದಿ ಅವರ ದೂರದೃಷ್ಟಿಯೇ ಕಾರಣ ಎಂದರು.

ಇವತ್ತು ಇಡೀ ಜಗತ್ತನ್ನು ಭಾರತದ ನೆಲದಲ್ಲಿ ನಿಂತು ನೋಡುವಂಥ ಪರಿಸ್ಥಿತಿ ಈಗ ಉಂಟಾಗಿದೆ. ಆ ದಿಕ್ಕಿನಲ್ಲಿ ದೇಶವನ್ನು ಬಲವಾಗಿ ಕಟ್ಟಿದ ಹೆಗ್ಗಳಿಕೆ ನಮ್ಮ ಪ್ರಧಾನಿಗೆ ಸಲ್ಲಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದರು.

ಭಾರತವು ಕೋವಿಡ್ ನಿರ್ವಹಿಸಿದ ರೀತಿ ಇಡೀ ಜಗತ್ತಿಗೇ ದಾರಿ ತೋರುವಂತೆ ಮಾಡಿದೆ. ಅಮೆರಿಕದಂಥ ಬಲಿಷ್ಠ ದೇಶಗಳೆ ಕೋವಿಡ್ ನಿರ್ವಹಣೆಯಲ್ಲಿ ಸೋತವು. ಆದರೆ ಭಾರತ ಗೆದ್ದಿತು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಸೇರಿ ಕೊರೋನ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಆಹಾರ ಕಿಟ್, ಕೊರೋನ ಕಿಟ್ ವಿತರಿಸಲಾಯಿತು. ಪೌರ ಕಾರ್ಮಿಕರ ಪಾದಪೂಜೆ ಕೂಡ ಈ ಸಂದರ್ಭದಲ್ಲಿ ಮಾಡಲಾಯಿತು. ಜತೆಗೆ ಪ್ರತಿಭಾವಂತ ಮಕ್ಕಳು ಹಾಗೂ ವಿಕಲಚೇತನ ಮಕ್ಕಳನ್ನು ಅಭಿನಂದಿಸಲಾಯಿತು. ಮಾಜಿ ಶಾಸಕ ಮುನಿರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News