ವೈಚಾರಿಕ ಮನೋಭಾವ ಬೆಳೆದರೆ ಮಾತ್ರ ದೇವರು, ಜ್ಯೋತಿಷ್ಯದ ಹೆಸರಿನ ಸುಲಿಗೆ ತಪ್ಪಲು ಸಾಧ್ಯ: ಡಾ.ಹುಲಿಕಲ್ ನಟರಾಜ್

Update: 2020-09-17 14:47 GMT

ಬೆಂಗಳೂರು, ಸೆ. 17: `ಜನಸಾಮಾನ್ಯರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವನೆ ಬೆಳೆದರೆ ಮಾತ್ರ ದೇವರು, ಧರ್ಮ, ಮೌಢ್ಯ, ಕಂದಾಚಾರ ಮತ್ತು ಜ್ಯೋತಿಷ್ಯದ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆಯನ್ನು ತಪ್ಪಿಸಲು ಸಾಧ್ಯ' ಎಂದು ವಿಚಾರವಾದಿ ಮತ್ತು ಪವಾಡ ರಹಸ್ಯ ಬಯಲು ಮಾಡುವ ಡಾ.ಹುಲಿಕಲ್ ನಟರಾಜ್ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುರುವಾರ ಇಲ್ಲಿನ ಗಾಂಧಿ ಭವನದಲ್ಲಿ ವಿಚಾರವಾದಿಗಳ ವೇದಿಕೆ-ಕರ್ನಾಟಕ(ವಿವೇಕ) ವತಿಯಿಂದ ವಿಚಾರವಾದಿ ಇ.ವಿ.ಪೆರಿಯಾರ್ ರಾಮಸ್ವಾಮಿ ಅವರ 141ನೆ ಜಯಂತಿ ಹಾಗೂ 'ಪೆರಿಯಾರ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಪೆರಿಯಾರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, `ಜನರು ದೇಹದ ಮಡಿ, ಮೈಲಿಗೆಯನ್ನು ಬಿಟ್ಟು ಮನಸ್ಸಿನ ಮಡಿ ಬೆಳೆಸಿಕೊಳ್ಳಬೇಕು. ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವತ್ತಲೂ ಗಮನಹರಿಸಬೇಕು' ಎಂದು ಸಲಹೆ ಮಾಡಿದರು.

'ಇತ್ತೀಚಿನ ದಿನಗಳಲ್ಲಿ ದೇವರು, ಧರ್ಮ, ಮೌಢ್ಯ, ಕಂದಾಚಾರ, ಜ್ಯೋತಿಷ್ಯದ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಇದನ್ನು ವಿರೋಧಿಸಿ ನಾನು ಪವಾಡ ರಹಸ್ಯ ಬಯಲು ಮಾಡುವ ಮೂಲಕ ಜನರಿಗೆ ಸತ್ಯ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ಆದರೆ, ಕೆಲವರು ನನ್ನ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದಲ್ಲದೆ, ನನಗೂ ಬೆದರಿಕೆವೊಡ್ಡುತ್ತಿದ್ದಾರೆ. ಹೀಗಾಗಿ ನನ್ನ ಜೀವಕ್ಕೂ ಅಪಾಯವಿದೆ' ಎಂದು ಹುಲಿಕಲ್ ನಟರಾಜ್ ಆತಂಕ ವ್ಯಕ್ತಪಡಿಸಿದರು.

'ವಿಚಾರವಾದಿ ರಾಮಸ್ವಾಮಿ ಪೆರಿಯಾರ್ ಅವರ ಪ್ರಶಸ್ತಿಗೆ ನಾನು ಎಷ್ಟು ಅರ್ಹನೆಂಬುದು ಗೊತ್ತಿಲ್ಲ. ಆದರೆ, ಈ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಜೊತೆಗೆ ನನ್ನ ಕೆಲಸ-ಕಾರ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ದೊರೆತಿದೆ ಎಂಬುದು ನನ್ನ ಭಾವನೆ. ಮೌಢ್ಯ, ಕಂದಾಚಾರಗಳನ್ನು ತೊಡೆದುಹಾಕಲು ಜನಜಾಗೃತಿಗೆ ಆಂದೋಲನದ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಆಲೋಚಿಸಬೇಕು' ಎಂದು ಅವರು ಸಲಹೆ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಆರ್‍ಪಿಐ ಮತ್ತು ಎಸ್‍ಎಸ್‍ಡಿ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, `ಬುದ್ಧ, ಬಸವ, ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ರೀತಿಯಲ್ಲಿ ಜನರು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರವೇ ಸಮಾಜದಲ್ಲಿ ಬದಲಾವಣೆ ಸಾಧ್ಯ. ಪವಾಡ ರಹಸ್ಯ ಬಯಲು ಮಾಡುವ ಹುಲಿಕಲ್ ನಟರಾಜ್ ಅವರು ಜನರಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ' ಎಂದರು.

`ಪೆರಿಯಾರ್ ಅವರ ಹೆಸರಿನಲ್ಲಿ ಈವರೆಗೂ 13 ಮಂದಿಗೆ ಪ್ರಶಸ್ತಿ ನೀಡಿದ್ದು, ಈ ವರ್ಷ ಹುಲಿಕಲ್ ನಟರಾಜ್ ಅವರಿಗೆ ಈ ಪ್ರಶಸ್ತಿ ನೀಡಿದ್ದು, ಎಲ್ಲ ಪುರಸ್ಕೃತರು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ನಟರಾಜ್ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಅವರೊಂದಿಗೆ ವಿಚಾರವಾದಿಗಳು ಮತ್ತು ಪ್ರಗತಿಪರ ಸಂಘಟನೆಗಳಿವೆ ಎಂದು ಈ ಮೂಲಕ ಬೆದರಿಕೆ ಹಾಕುವವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನಟರಾಜ್ ಅವರು ತಮ್ಮ ಪವಾಡ ಭಂಜಕ ಕಾರ್ಯವನ್ನು ಮುಂದುವರಿಸಬೇಕು' ಎಂದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಪರಿವರ್ತನ ವೇದಿಕೆ ಅಧ್ಯಕ್ಷ ವೈ.ಮರಿಸ್ವಾಮಿ, ದಸಂಸ ಅಧ್ಯಕ್ಷ ಲಯನ್ ಬಾಲಕೃಷ್ಣ, ಮುಖಂಡರಾದ ಜಿಗಣಿ ಶಂಕರ್, ಬಿ.ಆರ್.ಮುನಿರಾಜು, ಗೋಪಾಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕರ್ನಾಟಕ ರಾಜ್ಯದಲ್ಲಿ ವಿಚಾರವಾದಿ ಪೆರಿಯಾರ್ ರಾಮಸ್ವಾಮಿ ಅವರ ವೈಜ್ಞಾನಿಕ ಮತ್ತು ವೈಚಾರಿಕಾ ಮನೋಭಾವದ ಪರಂಪರೆಯೇ ಇದೆ. ಪ್ರೊ.ಕೆ.ರಾಮದಾಸ್, ಪಿ.ಲಂಕೇಶ್, ಪ್ರೊ.ಬಿ.ಕೃಷ್ಣಪ್ಪ ಸೇರಿದಂತೆ ದೊಡ್ಡ ಪಡೆಯೇ ಇಲ್ಲಿದೆ. ಮೌಢ್ಯ, ಕಂದಾಚಾರ, ದೇವರು, ಧರ್ಮ ಮತ್ತು ಜ್ಯೋತಿಷ್ಯದ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡಲು ಇಲ್ಲಿ ಅವಕಾಶ ನೀಡುವುದಿಲ್ಲ. ಜನರಲ್ಲಿ ವೈಚಾರಿಕತೆ ಮನೋಭಾವ ಬೆಳೆಸಲು ನಾವೆಲ್ಲರೂ ಶ್ರಮಿಸೋಣ

-ಎಂ.ವೆಂಕಟಸ್ವಾಮಿ, ಆರ್‍ಪಿಐ ಮತ್ತು ಎಸ್‍ಎಸ್‍ಡಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News