ಅನಿಲ್ ಅಂಬಾನಿ ವಿರುದ್ಧ ಎಸ್‌ಬಿಐ ದಾಖಲಿಸಿದ್ದ ದಿವಾಳಿತನ ಪ್ರಕರಣ ಮುಂದುವರಿಸಲು ಸುಪ್ರೀಂ ನಕಾರ

Update: 2020-09-17 14:58 GMT

ಹೊಸದಿಲ್ಲಿ, ಸೆ.17: ಉದ್ಯಮಿ ಅನಿಲ್ ಅಂಬಾನಿ ವಿರುದ್ಧ ಎಸ್‌ಬಿಐ(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ದಾಖಲಿಸಿದ್ದ ವೈಯಕ್ತಿಕ ದಿವಾಳಿತನ ಪ್ರಕರಣದ ವಿಚಾರಣೆ ಮುಂದುವರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಅನಿಲ್ ಅಂಬಾನಿ ವಿರುದ್ಧದ ದಿವಾಳಿತನ ಮೊಕದ್ದಮೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ನ್ಯಾಯಾಧೀಶ ಎಲ್ ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ತಿಳಿಸಿತು ಮತ್ತು ಭಾರತದ ದಿವಾಳಿತನ ಕಾನೂನಿನ ಉಪಬಂಧಗಳನ್ನು ಪ್ರಶ್ನಿಸಿ ಅನಿಲ್ ಅಂಬಾನಿ ಸಲ್ಲಿಸಿರುವ ಅರ್ಜಿಯ ಬಗ್ಗೆ ದಿಲ್ಲಿ ಹೈಕೋರ್ಟ್ ವಿಚಾರಣೆ ನಡೆಸಬೇಕು ಎಂದು ಹೇಳಿದೆ.

ತನ್ನ ಎರಡು ಟೆಲಿಕಾಂ ಸಂಸ್ಥೆಗಳಿಗೆ ಸ್ಟೇಟ್ ಬ್ಯಾಂಕ್‌ನಿಂದ ಪಡೆದ ಸುಮಾರು 160 ಮಿಲಿಯನ್ ಡಾಲರ್ ಮೊತ್ತದ ಸಾಲಕ್ಕೆ ಅನಿಲ್ ಅಂಬಾನಿ ಜಾಮೀನುದಾರರಾಗಿದ್ದರು. ಆದರೆ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಎಸ್‌ಬಿಐ ಕೋರಿಕೆಯಂತೆ ದಿವಾಳಿತನ ಪ್ರಕ್ರಿಯೆಯ ನ್ಯಾಯಮಂಡಳಿ ದಿವಾಳಿತನ ಪ್ರಕ್ರಿಯೆಗೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಅಂಬಾನಿ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಹೈಕೋರ್ಟ್ ಅಂಬಾನಿ ಪರ ತೀರ್ಪು ನೀಡಿತ್ತು ಮತ್ತು ದಿವಾಳಿತನ ಪ್ರಕ್ರಿಯೆಗೆ ತಡೆ ನೀಡಿತ್ತು. ದಿವಾಳಿತನ ಪ್ರಕ್ರಿಯೆಗೆ ತಡೆ ನೀಡಿರುವುದು ಕಾನೂನುಬಾಹಿರ ಕ್ರಮ ಎಂದು ಆಕ್ಷೇಪಿಸಿ ಎಸ್‌ಬಿಐ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಓರ್ವ ವ್ಯಕ್ತಿಯನ್ನು ದಿವಾಳಿ ಎಂದು ಘೋಷಿಸುವುದರಿಂದ ಗಂಭೀರ ಪರಿಣಾಮ ಉಂಟಾಗುತ್ತದೆ. ಬಿಲಿಯಾಂತರ ರೂಪಾಯಿ ಸಾಲವಿದೆ ಎಂಬ ಕಾರಣ ನೀಡಿರುವುದು ಸಾಲನೀಡಿದವರ ವಾಕ್ಚಾತುರ್ಯದ ಪ್ರದರ್ಶನ ಎಂದು ಅಂಬಾನಿ ಪರ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು. ಕಳೆದ ವರ್ಷ ವೈಯಕ್ತಿಕ ದಿವಾಳಿತನ ಪ್ರಕ್ರಿಯೆಗೆ ನಿಯಮ ರೂಪಿಸಿದ ಬಳಿಕ ನ್ಯಾಯಾಲಯ ಪರಿಶೀಲಿಸಿದ ಪ್ರಥಮ ಹೈಪ್ರೊಫೈಲ್ ಪ್ರಕರಣ ಇದಾಗಿದ್ದು , ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಬಗ್ಗೆ ಭಾರೀ ಕುತೂಹಲ ಮೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News