ವಲಸೆ ಕಾರ್ಮಿಕರು ಅನ್ಯಗ್ರಹವಾಸಿಗಳೇ?

Update: 2020-09-19 05:36 GMT

ಸಂಸತ್ತಿನಲ್ಲಿ ಪ್ರಶ್ನೋತ್ತರ ಅವಧಿಯನ್ನು ಕಡಿತಗೊಳಿಸಿದ್ದು ಇತ್ತೀಚೆಗೆ ಮಾಧ್ಯಮಗಳಲ್ಲಿ ಚರ್ಚೆಗೊಳಗಾಯಿತು. ಆದರೆ ಇದರಿಂದ ಜನರಿಗೆ ವಿಶೇಷ ನಷ್ಟವೇನೂ ಆಗಿಲ್ಲ. ಯಾಕೆಂದರೆ ಯಾವ ಪ್ರಶ್ನೆಗಳಿಗೂ ಸರಕಾರ ಈವರೆಗೆ ಸರಿಯಾದ ಉತ್ತರವನ್ನೇ ನೀಡಿಲ್ಲ. ಅನೇಕ ಸಂದರ್ಭದಲ್ಲಿ ಪ್ರಶ್ನೆಗಳಿಗೆ ಪ್ರಶ್ನೆಗಳನ್ನಷ್ಟೇ ಉತ್ತರವಾಗಿ ನೀಡುತ್ತಿತ್ತು. ಒಂದು ವೇಳೆ, ಪ್ರಶ್ನೆಗಳಿಗೆ ಉತ್ತರಿಸಿದರೂ ಅದನ್ನು ಬಿತ್ತರಿಸುವುದಕ್ಕೆ ಈ ದೇಶದ ಮಾಧ್ಯಮಗಳಿಗೆ ಆಸಕ್ತಿಯೇ ಇಲ್ಲ. ಎಲ್ಲ ಪ್ರಶ್ನೆಗಳಿಗೂ ಉತ್ತರ ‘ಮೋದಿ...ಮೋದಿ...ಮೋದಿ’ ಎಂದೇ ಆಗಿರುವಾಗ ಸುಮ್ಮನೆ ಪ್ರಶ್ನೆಗಳನ್ನು ಕೇಳುತ್ತಾ ಸಮಯ ಕಳೆಯುವುದು ಯಾಕೆ ಎಂದು ಸರಕಾರ ಪ್ರಶ್ನಾವಧಿಯನ್ನು ಮೊಟಕುಗೊಳಿಸಿರಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಾವು ಮತ್ತು ಅವರಿಗೆ ನೀಡಿದ ಪರಿಹಾರ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಸಿಕ್ಕಿದ ಉತ್ತರವೇ ಈ ದೇಶದ ಸ್ಥಿತಿಗತಿಯನ್ನು ಹೇಳುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ನಡೆದ ವಲಸೆ ಕಾರ್ಮಿಕರ ಮಹಾಪಯಣ, ಸಾವು ನೋವು, ಬೀದಿಗೆ ಬಿದ್ದ ಅವರ ಬದುಕು ವಿಶ್ವಾದ್ಯಂತ ಸುದ್ದಿಯಾಗಿದ್ದರೂ, ಆ ಬಗ್ಗೆ ಸರಕಾರದ ಬಳಿ ಯಾವುದೇ ಮಾಹಿತಿಗಳು ಇಲ್ಲವಂತೆ. ವಲಸೆ ಕಾರ್ಮಿಕರ ಸ್ಥಿತಿಗತಿಯ ಕುರಿತಂತೆ ಮಾಹಿತಿಗಳನ್ನು ಸಂಗ್ರಹಿಸಲು ಜಿಲ್ಲಾ ಮಟ್ಟದಲ್ಲಿ ಯಾವುದೇ ವ್ಯವಸ್ಥೆಗಳು ಇಲ್ಲ ಎಂದು ಸರಕಾರ ಹೇಳಿದೆ. ಹಲವು ವರ್ಷಗಳ ಹಿಂದೆ ಅಭಿವೃದ್ಧಿಗೊಳಿಸಿದ ಮಾನದಂಡಗಳಿಗೆ ಅನುಗುಣವಾಗಿ ನಗರ ಸಭೆ ಮಟ್ಟದ ಜನನ ಹಾಗೂ ಮರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನಿರ್ವಹಿಸಲಾಗುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಮೃತಪಟ್ಟ, ಬದುಕು ಕಳೆದುಕೊಂಡ ಕಾರ್ಮಿಕರ ಪುನರ್ವಸತಿಗಾಗಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವುದನ್ನು ಸರಕಾರ ಸ್ಪಷ್ಟವಾಗಿ ಹೇಳಿದೆ.

 ಸರಕಾರದ ಉತ್ತರವನ್ನು ಎರಡು ವಿಧದಲ್ಲಿ ನಾವು ಅರ್ಥೈಸಿಕೊಳ್ಳಬೇಕಾಗುತ್ತದೆ. ಒಂದೋ ಸರಕಾರ ವಲಸೆ ಕಾರ್ಮಿಕರನ್ನು ಈ ದೇಶದ ಪೌರರಾಗಿ ಭಾವಿಸಿಲ್ಲ. ಆದುದರಿಂದಲೇ ಅವರ ಸಾವು ನೋವುಗಳಿಗೆ ಸ್ಪಂದಿಸುವುದು ತನ್ನ ಜವಾಬ್ದಾರಿಯಲ್ಲ ಎಂದು ಅವರನ್ನು ಕೈ ಬಿಟ್ಟಿದೆ ಅಥವಾ ಅಂಕಿಅಂಶಗಳನ್ನು ತನ್ನ ಬಳಿ ಇಟ್ಟುಕೊಂಡು ಅದನ್ನು ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿದೆ. ಒಂದು ಮೂಲದ ಪ್ರಕಾರ ಸರಕಾರ ವಲಸೆ ಕಾರ್ಮಿಕರ ಸಾವಿನ ಕುರಿತಂತೆ ಮಾಹಿತಿಗಳನ್ನು ಸಂಗ್ರಹಿಸಿದೆ. ಈ ಬಗ್ಗೆ ‘ದಿ ವೈರ್’ ಆರ್‌ಟಿಐ ಮೂಲಕ ಪಡೆದ ಮಾಹಿತಿಯಿಂದ ಬಹಿರಂಗವಾಗಿದೆ. ಭಾರತೀಯ ರೈಲ್ವೆಯ 18 ವಲಯಗಳಲ್ಲಿ ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಗಳಿಗೆ ದೊರೆತ ಉತ್ತರದಲ್ಲಿ ಶ್ರಮಿಕ್ ವಿಶೇಷ ರೈಲುಗಳಲ್ಲಿ ಕನಿಷ್ಠ 80 ಜನರು ಮೃತಪಟ್ಟಿರುವುದು ದೃಢಪಟ್ಟಿದೆ. ಹೀಗೆ ಮೃತಪಟ್ಟವರಲ್ಲಿ ಎರಡು ನವಜಾತ ಶಿಶುಗಳು ಹಾಗೂ ಒಬ್ಬ 85 ವರ್ಷದ ವೃದ್ಧ ಕೂಡ ಸೇರಿದ್ದಾರೆ. ಆದರೆ ನಡೆದ ಸಾವು ನೋವುಗಳು ಇಷ್ಟೇ ಆಗಿರಲಿಲ್ಲ. ನಗರದಲ್ಲಿ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಅನಿವಾರ್ಯವಾಗಿ ತಮ್ಮ ಊರಿಗೆ ಮರಳಲೇ ಬೇಕಾಯಿತು. ಆದರೆ ಪ್ರಯಾಣಿಸುವುದಕ್ಕೆ ಯಾವುದೇ ವಾಹನಗಳಿಲ್ಲದ ಕಾರಣದಿಂದ ಅವರು ನೂರಾರು ಕಿ.ಮೀ. ನಡೆದುಕೊಂಡೇ ಸಾಗಿದರು. ಮಾಧ್ಯಮಗಳ ಮುಖಪುಟಗಳಲ್ಲಿ ಈ ವಲಸೆ ಕಾರ್ಮಿಕರ ಮಹಾ ಪಯಣಗಳು ವರದಿಯಾಗಿದ್ದವು. ಹಲವರು ದಾರಿ ಮಧ್ಯೆಯೇ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಬಹಳಷ್ಟು ಜನರು ಹಸಿವಿನಿಂದ ಸತ್ತಿದ್ದಾರೆ. ಊರಿಗೆ ತಲುಪಿದರೂ ತಮ್ಮ ಹಳ್ಳಿಯೊಳಗೆ ಪ್ರವೇಶ ಸಿಕ್ಕುವುದು ಅವರಿಗೆ ಕಷ್ಟವಾಯಿತು. ಇವರನ್ನು ಊರಿನ ಜನರು ಸ್ವೀಕರಿಸುವುದಕ್ಕೆ ಸಿದ್ಧರಿರಲಿಲ್ಲ. ಮರಗಳ ಅಡಿಯಲ್ಲಿ, ರಸ್ತೆ ಬದಿಯಲ್ಲಿ ‘ಕ್ವಾರಂಟೈನ್’ ಮಾಡಬೇಕಾದ ದುರ್ಬರ ಸ್ಥಿತಿಗೆ ಅವರು ಸಿಲುಕಿಕೊಂಡರು. ಸರಕಾರ ಇವರೆಲ್ಲರ ನೆರವಿಗೆ ಬರಬೇಕಾದರೆ ಈ ಬಗ್ಗೆ ಅಂಕಿಸಂಕಿಗಳ ಅರಿವಿರಬೇಕು. ‘ತನ್ನಲ್ಲಿ ಯಾವುದೇ ದಾಖಲೆಗಳು ಇಲ್ಲ’ ಎನ್ನುವುದರ ಅರ್ಥವೇ ‘ತಾನು ಯಾವುದೇ ಪರಿಹಾರಗಳನ್ನು ಒದಗಿಸಿಲ್ಲ’ ಎಂದೇ ಆಗಿದೆ.

ಈ ದೇಶದಲ್ಲಿ ಲಾಕ್‌ಡೌನ್ ಯಾಕೆ ವಿಫಲವಾಯಿತು, ಕೊರೋನ ಹೇಗೆ ಸಮುದಾಯ ಹಂತಕ್ಕೆ ತಲುಪಿತು ಎನ್ನುವುದಕ್ಕೆ ಉತ್ತರ ಸರಕಾರದ ಹೇಳಿಕೆಯಲ್ಲೇ ಇದೆ. ಪ್ರಧಾನಿ ನರೇಂದ್ರ ಮೋದಿ ಏಕಾಏಕಿ, ಯಾವ ಪೂರ್ವ ತಯಾರಿಯೂ ಇಲ್ಲದೆ ನೋಟು ನಿಷೇಧದಂತೆಯೇ ಲಾಕ್‌ಡೌನ್‌ನ್ನು ಘೋಷಿಸಿದರು. ಯಾವ ಪೂರ್ವ ಸೂಚನೆಯೂ ಇಲ್ಲದೆ ಮನೆಯ ಕಿಟಕಿ, ಬಾಗಿಲುಗಳನ್ನು ಹೊರಗಿನಿಂದ ಲಾಕ್ ಮಾಡಿದಂತೆ, ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಯಿತು. ಲಾಕ್‌ಡೌನ್‌ನ ಉದ್ದೇಶ, ಯಾರೂ ಪರಸ್ಪರ ಸಂಪರ್ಕಕ್ಕೆ ಬರದಂತೆ ತಡೆದು ಕೊರೋನ ವೈರಸ್ ಹರಡದಂತೆ ನೋಡಿಕೊಳ್ಳುವುದು. ಆದರೆ ಒಂದೇ ವಾರದಲ್ಲಿ ಸರಕಾರದ ಉದ್ದೇಶ ಮಣ್ಣು ಪಾಲಾಯಿತು. ದೇಶದ ವಿವಿಧ ನಗರಗಳಲ್ಲಿ ಬೆಂಕಿಯ ಹೊಗೆಗೆ ಗೂಡಿಂದ ಹೊರಬರುವ ಜೇನು ನೊಣಗಳಂತೆ, ತಂಡ ತಂಡವಾಗಿ ವಲಸೆ ಕಾರ್ಮಿಕರು ಬಸ್‌ಸ್ಟೇಂಡ್, ರಸ್ತೆಗಳಲ್ಲಿ ನೆರೆಯ ತೊಡಗಿದರು. ಒಂದೆಡೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಜನರು ಮನೆಯೊಳಗೆ ಬಚ್ಚಿಟ್ಟುಕೊಂಡಿದ್ದರೆ, ಇತ್ತ ಅವರನ್ನು ಅಣಕಿಸುವಂತೆ ವಲಸೆ ಕಾರ್ಮಿಕರು ಎಲ್ಲ ಸುರಕ್ಷಿತ ಅಂತರಗಳ ನಿಯಮಗಳನ್ನು ಮೀರಿದರು. ‘ಕೊರೋನ ಬಂದು ಸತ್ತರೂ ಪರವಾಗಿಲ್ಲ, ಆದರೆ ಹಸಿವಿನಿಂದ ಸಾಯುವುದು ನಮ್ಮಿಂದ ಸಾಧ್ಯವಿಲ್ಲ’ ಎಂದು ವಲಸೆ ಕಾರ್ಮಿಕರು ನುಡಿದರು.

ರೈಲ್ವೆ ಹಳಿಗಳ ಮೇಲೆ ನಡೆಯುತ್ತಾ ಸಾಗುತ್ತಿದ್ದ ಜನರ ಮೇಲೆಯೇ ರೈಲು ಹರಿದು ಹಲವರು ಸತ್ತರು. ಒಟ್ಟಿನಲ್ಲಿ, ವಲಸೆ ಕಾರ್ಮಿಕರಿಗೆ ಪರಿಹಾರ ಕಂಡುಕೊಳ್ಳದೆ ಲಾಕ್‌ಡೌನ್ ಘೋಷಿಸಿದ ಕಾರಣ ಇಡೀ ಲಾಕ್‌ಡೌನ್ ವಿಫಲವಾಯಿತು. ವಲಸೆ ಕಾರ್ಮಿಕರ ಮೂಲಕವೇ ಇದು ನಿಧಾನಕ್ಕೆ ಸಮುದಾಯ ಹಂತವನ್ನು ತಲುಪಿತು. ಲಾಕ್‌ಡೌನ್‌ಗಾಗಿ ದೇಶದ ಜನರು ಮಾಡಿದ ತ್ಯಾಗ ಬಲಿದಾನವೂ ಸರಕಾರದ ಬೇಜವಾಬ್ದಾರಿಯಿಂದ ವಿಫಲವಾಯಿತು. ಅಂಬಾನಿ, ಅದಾನಿಗಳೇ ದೇಶ ಎಂದು ತಿಳಿದುಕೊಂಡಿದ್ದ ಸರಕಾರ ವಲಸೆ ಕಾರ್ಮಿಕರ ಬದುಕಿನ ಕುರಿತಂತೆ ಇನ್ನೂ ಎಚ್ಚೆತ್ತುಕೊಂಡಿಲ್ಲ ಎನ್ನುವುದು ಸರಕಾರದ ಹೇಳಿಕೆಯಿಂದ ಬಹಿರಂಗವಾಗಿದೆ. ಅವರನ್ನು ಅನ್ಯಗ್ರಹವಾಸಿಗಳೆಂದು ಸರಕಾರ ಪರಿಗಣಿಸಿದಂತಿದೆ. ನಗರಗಳ ಅಭಿವೃದ್ಧಿಯ ತಳಪಾಯವೇ ಈ ವಲಸೆಕಾರ್ಮಿಕರು ಎನ್ನುವುದನ್ನು ಮರೆತಿದೆ. ಅಡಿಪಾಯದ ಕುರಿತಂತೆ ಕಾಳಜಿ ವಹಿಸದೆ ಕಟ್ಟಿ ನಿಲ್ಲಿಸುವ ಕಟ್ಟಡ ಅದು ಹೇಗೆ ಬಾಳಿಕೆ ಬಂದೀತು? ನೋಟು ನಿಷೇಧದಿಂದ ಭಾಗಶಃ ಬದುಕನ್ನು ಕಳೆದುಕೊಂಡಿದ್ದ ವಲಸೆ ಕಾರ್ಮಿಕರು ಲಾಕ್‌ಡೌನ್ ಬಳಿಕ ಸಂಪೂರ್ಣ ನಾಶವಾಗಿದ್ದಾರೆ. ಮೊತ್ತ ಮೊದಲು ಈ ಕಾರ್ಮಿಕರ ಬದುಕನ್ನು ಎತ್ತಿ ನಿಲ್ಲಿಸುವ ಕೆಲಸವಾಗಬೇಕು. ಅದು ನಡೆಯಬೇಕಾದರೆ, ಲಾಕ್‌ಡೌನ್ ಸಂದರ್ಭದಲ್ಲಿ ವಲಸೆಕಾರ್ಮಿಕರ ಸ್ಥಿತಿಗತಿಗಳು ಹೇಗಿದ್ದವು, ಎಷ್ಟು ಮಂದಿ ಮೃತಪಟ್ಟಿದ್ದಾರೆ, ಅಳಿದುಳಿದವರು ಎಲ್ಲಿ, ಹೇಗಿದ್ದಾರೆ ಎನ್ನುವುದರ ವಿವರಗಳನ್ನು ಸರಕಾರ ಕಲೆ ಹಾಕಬೇಕು. ಅವರ ಬದುಕನ್ನು ಮೇಲೆತ್ತದೆ ಅಭಿವೃದ್ಧಿಯನ್ನು ಎತ್ತಿ ನಿಲ್ಲಿಸುವುದು ಅಸಾಧ್ಯ ಎನ್ನುವುದನ್ನು ಸರಕಾರ ಇನ್ನಾದರೂ ಮನಗಾಣಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News