ಮೂರು ತಿಂಗಳಲ್ಲಿ ಶೇ.100 ಕಸ ವಿಂಗಡಣೆಯಾಗಬೇಕು: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2020-09-18 18:09 GMT

ಬೆಂಗಳೂರು, ಸೆ.18: ಬಿಬಿಎಂಪಿ ವ್ಯಾಪ್ತಿಯ 38 ವಾರ್ಡ್‍ಗಳಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಯೋಜನೆ ಜಾರಿಗೊಳಿಸಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಶೇ.100 ರಷ್ಟು ಕಸ ವಿಂಗಡಣೆ ಹಾಗೂ ಇರುವ ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ)ಗಳನ್ನು ತೆರವುಗೊಳಿಸಿ ಮಾದರಿ ವಾರ್ಡ್‍ಗಳನ್ನಾಗಿಸಬೇಕು. ಅದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯವಶ್ಯ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಂಗಮ್ಮನಪಾಳ್ಯ ವಾರ್ಡ್-190 ರಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಸಂಬಂಧ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ವಾರ್ಡ್ ನಲ್ಲಿ ಗುರುತಿಸಿರುವ 29 ಬ್ಲಾಕ್‍ಗಳಲ್ಲೂ ಮೆನೆ-ಮನೆಯಿಂದ ಪ್ರತ್ಯೇಕವಾಗಿ ಕಸ ಸಂಗ್ರಹಿಸಲಾಗುವುದು.

ಹಸಿ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಪ್ರತಿನಿತ್ಯ ಸಂಗ್ರಹಿಸಲಿದ್ದು, ಒಣ ಕಸವನ್ನು ವಾರದಲ್ಲಿ ಎರಡು ಬಾರಿ ಸಂಗ್ರಹಿಸಲಾಗುತ್ತದೆ. ಈ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕಿದೆ. ಕಸ ಸಂಗ್ರಹಿಸಲು ಬರುವ ಆಟೋ ಚಾಲಕರು ಹಾಗೂ ಹೆಲ್ಪರ್‍ಗಳು ಸಮವಸ್ತ್ರ ಹಾಗೂ ಸುರಕ್ಷಾ ಸಾಮಗ್ರಿಗಳನ್ನು ಬಳಸಬೇಕು. ಮಸ್ಟರಿಂಗ್ ಪಾಯಿಂಟ್‍ನಲ್ಲಿ ಬಯೋಮಿಟ್ರಿಕ್ ಮೂಲಕ ಹಾಜರಾತಿ ಪಡೆಯಲಾಗುತ್ತದೆ. ನಿಗದಿತ ಸಮಯದಲ್ಲಿ ವೇತನ ನೀಡಲಾಗುವುದು ಎಂದು ಹೇಳಿದರು.

ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ನೀಡಬೇಕು. ಈ ಬಗ್ಗೆ ಲಿಂಕ್ ವರ್ಕರ್ಸ್‍ಗಳು ಮನೆ-ಮನೆಗೆ ಭೇಟಿ ನೀಡಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಅರಿವು ಮೂಡಿಸಿದ ಬಳಿಕವೂ ಕಸವನ್ನು ಪ್ರತ್ಯೇಕಿಸಿ ನೀಡದದ್ದರೆ ಅಂತಹವರ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದರೆ ಮಾರ್ಷಲ್ ಹಾಗೂ ಕಿರಿಯ ಆರೋಗ್ಯಾಧಿಕಾರಿಗಳು ಘನತ್ಯಾಜ್ಯ ನಿಯಮದಡಿ ದಂಡ ವಿಧಿಸಲಿದ್ದಾರೆ. ಪಾಲಿಕೆಯ ಜೊತೆ ಸಾರ್ವಜನಿಕರು ಸಹಕರಿಸಿದರೆ ಯಶಸ್ವಿಯಾಗಿ ತ್ಯಾಜ್ಯದ ಸಮಸ್ಯೆ ನಿವಾರಿಸಲು ಸಾಧ್ಯವಾಗಲಿದೆ ಎಂದರು.

ಇದೇ ವೇಳೆ ಪೌರಕಾರ್ಮಿಕರಿಗೆ ತ್ಯಾಜ್ಯ ಸಂಗ್ರಹಿಸುವುದು ಮತ್ತು ಸುರಕ್ಷತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಆಯುಕ್ತರು ಅಗತ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿಶೇಷ ಆಯುಕ್ತ(ಘನತ್ಯಾಜ್ಯ) ಡಿ.ರಂದೀಪ್, ಜಂಟಿ ಆಯುಕ್ತ (ಘನತ್ಯಾಜ್ಯ) ಸರ್ಫರಾಜ್ ಖಾನ್, ಅಧೀಕ್ಷಕ ಅಭಿಯಂತರರು (ಘನತ್ಯಾಜ್ಯ) ಬಸವರಾಜ್ ಕಬಾಡೆ, ಪೌರಕಾರ್ಮಿಕರು, ಮಾರ್ಷಲ್‍ಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News