ಕೋವಿಡ್ ಎಫೆಕ್ಟ್: ಶಾಲೆಗಳು ಮಾರಾಟಕ್ಕಿವೆ!

Update: 2020-09-19 03:56 GMT
ಫೈಲ್ ಫೋಟೊ

ಹೈದರಾಬಾದ್, ಸೆ.19: ದೇಶದ ಶಿಕ್ಷಣ ವಲಯದ ಮೇಲೆ ಕೋವಿಡ್-19 ತನ್ನ ಕರಾಳ ಛಾಯೆ ಬೀರಿದ್ದು, ಇದರ ಪರಿಣಾಮವಾಗಿ ದೇಶಾದ್ಯಂತ ಕೆಜಿ ಕ್ಲಾಸ್‌ನಿಂದ ಹಿಡಿದು 12ನೇ ತರಗತಿವರೆಗಿನ ಒಂದು ಸಾವಿರಕ್ಕೂ ಅಧಿಕ ಶಾಲೆಗಳನ್ನು ಮಾರಾಟ ಮಾಡುವ ಸ್ಥಿತಿ ಬಂದಿದೆ. ಇದು ಮುಂದಿನ ಎರಡು- ಮೂರು ವರ್ಷಗಳಲ್ಲಿ ಸುಮಾರು 75 ಸಾವಿರ ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಸಾಧ್ಯತೆ ಇದೆ.

ಮಾರಾಟಕ್ಕಿರುವ ಬಹುತೇಕ ಶಾಲೆಗಳು ಖಾಸಗಿ ಮಿತವೆಚ್ಚದ ಶಾಲೆಗಳಾಗಿದ್ದು, ವಾರ್ಷಿಕ 50 ಸಾವಿರ ರೂ.ಗಿಂತ ಕಡಿಮೆ ಶುಲ್ಕ ವಿಧಿಸುವ ಶಾಲೆಗಳಾಗಿವೆ ಎನ್ನುವುದು ಶಿಕ್ಷಣ ಮೂಲಸೌಕರ್ಯ ವಲಯದ ಕೆರೆಸ್ಟ್ರಾ ವೆಂಚರ್ಸ್‌ ಕಲೆಹಾಕಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ. ದೇಶದ ಶಿಕ್ಷಣ ವಲಯದಲ್ಲಿ ಶೇಕಡ 80ಕ್ಕಿಂತಲೂ ಹೆಚ್ಚು ಶಾಲೆಗಳು ಈ ವರ್ಗದಲ್ಲಿ ಬರುತ್ತವೆ.

"ಶಾಲೆಗಳು ಶಿಕ್ಷಕರಿಗೆ ವೇತನ ನೀಡುವುದು ಮತ್ತು ಇತರ ವೆಚ್ಚಗಳನ್ನು ಭರಿಸುವುದು ಅನಿವಾರ್ಯವಾಗಿದ್ದರೂ, ಹಲವು ರಾಜ್ಯ ಸರ್ಕಾರಗಳು ಶಾಲಾ ಶುಲ್ಕ ಸಂಗ್ರಹಕ್ಕೆ ಒಪ್ಪಿಗೆ ನೀಡಿಲ್ಲ. ಇದು ಈ ಸಂಸ್ಥೆಗಳ ಸಂಕಷ್ಟಕ್ಕೆ ಕಾರಣವಾಗಿದೆ" ಎಂದು ಕೆರೆಸ್ಟ್ರಾ ಪಾಲುದಾರ ವಿಶಾಲ್ ಗೋಯಲ್ ಹೇಳಿದ್ದಾರೆ. ಒಂದು ದೊಡ್ಡ ಶಾಲಾ ಸಮೂಹ ಬೋಧಕೇತರ ಸಿಬ್ಬಂದಿಯ ವೇತನವನ್ನು ಶೇಕಡ 70ರಷ್ಟು ಕಡಿತಗೊಳಿಸಿದೆ ಎಂದು ಅವರು ವಿವರಿಸಿದ್ದಾರೆ.

"ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬ ಸ್ಪಷ್ಟ ಚಿತ್ರಣ ದೊರಕದ ಹಿನ್ನೆಲೆಯಲ್ಲಿ ಹಣಕಾಸು ಸಂಸ್ಥೆಗಳು ಶಾಲೆಗಳಿಗೆ ಸಾಲ ನೀಡಲು ಕೂಡಾ ಹಿಂಜರಿಯುತ್ತಿವೆ. ಇದು ಇಂಥ ಸಂಸ್ಥೆಗಳ ಸಂಕಷ್ಟವನ್ನು ಹೆಚ್ಚಿಸಿವೆ" ಗೋಯಲ್ ಅವರ ಕಂಪೆನಿ 30-40 ಶಾಲೆಗಳ ಖರೀದಿಗೆ ಮುಂದಾಗಿದ್ದು, ಇದಕ್ಕಾಗಿ ಸುಮಾರು 1,400 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಿದೆ. ಅಂತೆಯೇ ಸದ್ಯ ದೇಶದಲ್ಲಿ 30ಕ್ಕೂ ಹೆಚ್ಚು ಶಾಲೆಗಳನ್ನು ಹೊಂದಿರುವ ಯೂರೊ ಕಿಡ್ಸ್ ಕೂಡಾ ವಿಸ್ತರಣೆಗೆ ಯೋಜನೆ ಹಾಕಿಕೊಂಡಿದೆ ಎಂದು ಸಹಸಂಸ್ಥಾಪಕ ಮತ್ತು ಸಮೂಹ ಸಿಇಓ ಪ್ರಜೋಧ್ ರಾಜನ್ ಹೇಳಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಕನಿಷ್ಠ 20-25 ಶಾಲೆಗಳು ಖರೀದಿದಾರರಿಗಾಗಿ ಎದುರು ನೋಡುತ್ತಿವೆ ಎಂದು ಲೊಯೆಸ್ಟ್ರಾ ಅಡ್ವೈಸರ್ಸ್‌ನ ಕಾರ್ಯನಿರ್ವಾಹಕ ಪಾಲುದಾರರಾದ ರಾಕೇಶ್ ಗುಪ್ತಾ ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News