ಸರಕಾರಿ ಭೂಮಿ ಅಡವಿಟ್ಟ ಪ್ರಕರಣ: ನಾಲ್ವರು ಇಂಜಿನಿಯರ್ ಗಳ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ

Update: 2020-09-19 14:18 GMT

ಬೆಂಗಳೂರು, ಸೆ.19: ಸರಕಾರಿ ಜಮೀನು ಅಡವಿಟ್ಟು ಬಹುಕೋಟಿ ಸಾಲ ಪಡೆದು ವಂಚನೆ ಮಾಡಿದ್ದ ಆರೋಪ ಪ್ರಕರಣ ಸಂಬಂಧ ನಾಲ್ವರು ಇಂಜಿನಿಯರ್ ಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶನಿವಾರ ನಗರದ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ವಿ. ರವಿ ಅವರ ಜಯನಗರದ ನಿವಾಸ ಮತ್ತು ಪಾಲಿಕೆ ಪ್ರಧಾನ ಕಚೇರಿ ಆವರಣದಲ್ಲಿರುವ ಕೊಠಡಿ, ಜಾಗೃತ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್ ವೆಂಕಟೇಶಪ್ಪ ಅವರ ಕಲ್ಯಾಣನಗರದ ಮನೆ ಹಾಗೂ ಪಾಲಿಕೆ ಪ್ರಧಾನ ಕಚೇರಿಯಲ್ಲಿರುವ ಕೊಠಡಿ, ಇಂದಿರಾನಗರದಲ್ಲಿರುವ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಅವರ ನಿವಾಸ ಹಾಗೂ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಘವೇಂದ್ರ ಅವರ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಶೋಧ ನಡೆಸಿದರು.

ಏನಿದು ಪ್ರಕರಣ?: ನಗರದಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯವನ್ನು ಸಂಸ್ಕರಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಗಾಗಿ ಶ್ರೀನಿವಾಸ ಗಾಯತ್ರಿ ರಿಸೋರ್ಸ್ ರಿಕವರಿ ಕಂಪೆನಿಗೆ ನೀಡಿದ್ದ ಸರಕಾರಿ ಜಮೀನು ಅಡವಿಟ್ಟು ಸಾಲ ಪಡೆದು ವಂಚಿಸಿದ ಮತ್ತು ತ್ಯಾಜ್ಯ ಸಂಸ್ಕರಿಸದ ಕಂಪೆನಿಗೆ 4.61 ಕೋಟಿ ಶುಲ್ಕ ಪಾವತಿಸಿದ ಪ್ರಕರಣ ಸಂಬಂಧ ಎಸಿಬಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಅಲ್ಲದೆ, ತ್ಯಾಜ್ಯ ಸಂಸ್ಕರಣೆಯ ಗುತ್ತಿಗೆ ಪಡೆದ ಖಾಸಗಿ ಕಂಪೆನಿಯು ಸರಕಾರಿ ಜಮೀನು ಅಡವಿಟ್ಟು 52.75 ಕೋಟಿ ಸಾಲ ಪಡೆಯಲು ಮತ್ತು ಅಕ್ರಮವಾಗಿ 4.61 ಕೋಟಿ ಶುಲ್ಕ ಪಾವತಿಗೆ ನೆರವಾಗಿರುವ ಆರೋಪ ನಾಲ್ವರು ಅಧಿಕಾರಿಗಳ ಮೇಲಿದೆ.

ಅಕ್ರಮದ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿದ್ದ ಎಸಿಬಿ ಅಧಿಕಾರಿಗಳು, ಆರೋಪಿಗಳ ವಿರುದ್ಧ ಸೆ.8ರಂದು ಪ್ರಕರಣ ದಾಖಲಿಸಿದ್ದರು. ಅದೇ ದಿನ ಶ್ರೀನಿವಾಸ ಗಾಯತ್ರಿ ರಿಸೋರ್ಸ್ ರಿಕವರಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಬಿಂಗಿ, ಪಾಲಿಕೆಯ ನಿವೃತ್ತ ಸಹಾಯಕ ಇಂಜಿನಿಯರ್ ಗಳಾದ ಶಿವಲಿಂಗೇಗೌಡ ಮತ್ತು ಚನ್ನಕೇಶವ ಅವರ ಮೇಲೆ ದಾಳಿ ನಡೆಸಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News