ಹೊಸ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ: ಶ್ರೀ ಚಂದ್ರಶೇಖರ ಸ್ವಾಮೀಜಿ

Update: 2020-09-19 07:07 GMT

ಬೆಂಗಳೂರು, ಸೆ.19: ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ, ಹೊಸ ಹೊಸ ಅವಕಾಶಗಳನ್ನು ಸ್ವೀಕರಿಸಲು ಮನಸ್ಸನ್ನು ಮುಕ್ತವಾಗಿಸಿಕೊಳ್ಳಬೇಕು ಎಂದು ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.

ವೆಬಿನಾರ್ ಮೂಲಕ ವಿಶ್ವದ ನಾನಾ ಭಾಗದಲ್ಲಿದ್ದ ಅನುಯಾಯಿಗಳೊಂದಿಗಿನ ಶನಿವಾರ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಸಮಾಜ ಸಮಸ್ಯೆ ಎದುರಿಸುವ ವೇಳೆ ಸಮಸ್ಯೆಯೊಂದಿಗೆ ಹೊಸ ಅವಕಾಶಗಳೂ ನಮ್ಮ ಮುಂದೆ ಬರುತ್ತವೆ. ಅಂತಹ ಅವಕಾಶಗಳನ್ನು ಸದುಪಯೋಗಿಸಿಕೊಂಡು ಸುದೃಢವಾಗುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂದರು.

ಮನಸ್ಸು ಮತ್ತು ದೇಹ ಎರಡರಲ್ಲೂ ಧನಾತ್ಮಕತೆಯನ್ನು ತುಂಬಿಸಿಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಪಡೆದವುಗಳು ಎಂದೆಂದಿಗೂ ನಮ್ಮಂದಿಗೆ ಇರುತ್ತವೆ. ಸುಲಭವಾಗಿ ಸಿಗುವುದು ಸಾಮಾನ್ಯವಾಗಿ ಕೊನೆಯವರೆಗೂ ಉಳಿಯುವುದಿಲ್ಲ. ಕೊನೆಯವರೆಗೂ ಉಳಿಯುವುದು ಯಾವತ್ತೂ ಸುಲಭವಾಗಿ ಸಿಗುವುದಿಲ್ಲ. ಆದುದರಿಂದ ಯಾವುದೇ ಕೆಲಸ ಮಾಡುವಾಗಲೂ ನಿಷ್ಠೆಯಿಂದ ಮಾಡುವಂತೆ ಅವರು ಸಲಹೆ ನೀಡಿದರು.

ಗತಿಸಿದ ವಿಷಾದ ಘಟನೆಗಳನ್ನು ಮನದಿಂದ ಹೊರಹಾಕಬೇಕು. ಇಲ್ಲದಿದ್ದರೆ ಅವು ಕೊಳೆತ ವಸ್ತುವಿನಂತೆ ನಮ್ಮ ಮನಸ್ಸನ್ನು ಸದಾ ಕೊಳೆಯುವಂತೆ ಮಾಡುತ್ತವೆ. ಅವು ಹೊಸ ವಿಷಯ ಮತ್ತು ಖುಷಿಯನ್ನು ನಮ್ಮ ಬಳಿ ಬಾರದಂತೆ ತಡೆಯುತ್ತವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಧಿಸಲು ಹೊರಟವನು ಗುರಿ ತಲುಪಲು ಸಾಧ್ಯವೋ ಅಸಾಧ್ಯವೋ ಅಂತ ಪದೇ ಪದೇ ಚಿಂತಿಸಬಾರದು. ಪ್ರಯತ್ನ ನಮ್ಮ ಕೆಲಸ. ಪ್ರಯತ್ನಕ್ಕೆ ಫಲ ನೀಡುವುದು ಪ್ರಕೃತಿಯ ಕೆಲಸ. ದೃಢ ವಿಶ್ವಾಸದಿಂದ ಹೆಜ್ಜೆ ಇಡಬೇಕು ಎಂದರು.

ಸುಮಾರು ಒಂದು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳ 172 ಆಹ್ವಾನಿತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News