‘ನೀವು ಭಾರತದಲ್ಲಿ ಇರಬಾರದು’ ಎಂದು ತಬ್ಲೀಗಿ ಸದಸ್ಯರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

Update: 2020-09-19 11:36 GMT
Photo: twocircles.net

ಮುಂಬೈ :  “ನೀವು ಹಿಂದುಸ್ತಾನದಲ್ಲಿ ಇರಲು ಯೋಗ್ಯರಲ್ಲ, ನೀವು ಇಲ್ಲಿ ಇರಲು ಸಾಧ್ಯವಿಲ್ಲ'' ಎಂದು ತಬ್ಲೀಗಿ ಜಮಾಅತ್ ಸದಸ್ಯರ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಸೆಪ್ಟೆಂಬರ್ 16ರ ರಾತ್ರಿ ತಬ್ಲೀಗಿ ಸದಸ್ಯರಾದ ಸುಹೈಲ್ ತಂಬೋಲಿ, ಅಸ್ಲಂ, ಸೈಯದ್ ಲಯಕ್, ನಿಝಾಮುದ್ದೀನ್ ಖಾಝಿ ಅವರ ಮೇಲೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಹೋಲ್ ಗ್ರಾಮದಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು.

ತಬ್ಲೀಗಿ ಜಮಾಅತ್ ಸದಸ್ಯರು ಧಾರರ್ ನಿಂದ ಅಂಬಜೊಗೈ ಗ್ರಾಮಕ್ಕೆ ತಮ್ಮ ಸ್ನೇಹಿತರೊಬ್ಬರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲೆಂದು ಕಾರಿನಲ್ಲಿ ಸಾಗುತ್ತಿದ್ದಾಗ  ಕಾರಿನ ಇಂಜಿನ್‍ ನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಹನ ನಿಲ್ಲಿಸಬೇಕಾಯಿತು. ನಂತರ ಸುಹೈಲ್ ಹಾಗೂ ಸೈಯದ್ ಅವರು ನೀರು ತರಲೆಂದು ಹೊರ ಹೋಗಿದ್ದರು. ಆಗ ಇಬ್ಬರು ಬೈಕ್‍ ನಲ್ಲಿ ಆಗಮಿಸಿ ಕಾರಿನಲ್ಲಿದ್ದ ಅಸ್ಲಂ ಹಾಗೂ ನಿಝಾಮುದ್ದೀನ್ ಅವರನ್ನು ನಿಂದಿಸಲು ಆರಂಭಿಸಿದ್ದರು. “ಅವರು ನಮ್ಮ ಸಮುದಾಯದ ವಿರುದ್ಧ ಕೆಟ್ಟ ಭಾಷೆ  ಪ್ರಯೋಗಿಸಿದರು'' ಎಂದು ಸಂತ್ರಸ್ತರು ಹೇಳಿದ್ದಾರೆ.

ಹಲ್ಲೆಕೋರರಲ್ಲಿ ಪರಿಪರಿಯಾಗಿ ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ದುಷ್ಕರ್ಮಿಗಳು ಕರೆ ಮಾಡಿ ಮತ್ತೆ ಆರು ಮಂದಿಯನ್ನು ಸ್ಥಳಕ್ಕೆ ಬರಮಾಡಿಕೊಂಡರು. ಅವರೆಲ್ಲರ ಕೈಗಳಲ್ಲೂ ಕೋಲುಗಳಿದ್ದವು ಎಂದು ಸಂತ್ರಸ್ತರು ವಿವರಿಸಿದ್ದಾರೆ.

 ದುಷ್ಕರ್ಮಿಗಳು ತಬ್ಲೀಗಿ ಸದಸ್ಯರ ಗಡ್ಡ ಎಳೆದು ಟೋಪಿಯನ್ನು ಎಸೆದಿದ್ದಾರೆ. ಈ ರೀತಿ ಅವರ ಮೇಲೆ ಸುಮಾರು 40 ನಿಮಿಷಗಳ ಕಾಲ ಸತತ ದೌರ್ಜನ್ಯ ನಡೆದಿದ್ದು ಪೊಲೀಸರು ಸುಮಾರು ಒಂದು ಗಂಟೆ ನಂತರ ಸ್ಥಳಕ್ಕೆ ಆಗಮಿಸಿದ್ದರು.

“ದುಷ್ಕರ್ಮಿಯೊಬ್ಬ ತನ್ನ ಕೈಯ್ಯಲ್ಲಿದ್ದ ಕೋಲು ತುಂಡಾಗುವ ತನಕ ನನ್ನ ತಲೆಗೆ ಹೊಡೆದಿದ್ದ. ನಾನು ಸತ್ತೇ ಹೋಗುತ್ತೇನೆಂದು ಅಂದುಕೊಂಡಿದ್ದೆ'' ಎಂದು ಸುಹೈಲ್ ಹೇಳಿದ್ದಾರೆ.

ನಮ್ಮ ಮೇಲೆ ಏಕೆ ಹಲ್ಲೆ ನಡೆಸಲಾಗಿದೆ ಎಂಬುದು ತಿಳಿದು ಬಂದಿಲ್ಲ ಎಂದು ಅವರು ಹೇಳಿದ್ದಾರೆ. “ಅವರು ಪ್ರಜ್ಞೆ ತಪ್ಪುವ ತನಕ ಹೊಡೆದು ಕೊನೆಗೆ  ‘ಅವರು ಸತ್ತಿದ್ದಾರೆ’ ಎಂದು ಹೇಳುತ್ತಾ ಅಲ್ಲಿಂದ ತೆರಳಿದ್ದಾರೆ ಎಂದು ಅನತಿ ದೂರದಲ್ಲಿ ಅಸಹಾಯಕರಾಗಿ ನಿಂತು ತಮ್ಮವರ ಮೇಲಿನ ದಾಳಿಯನ್ನು ನೋಡಿದ್ದ ಸೈಯದ್ ಮತ್ತು ಅಸ್ಲಂ ಹೇಳಿದ್ದಾರೆ.  ಅವರು ಗ್ರಾಮದ ಮಂದಿಗೆ ಕರೆ ಮಾಡಿದ ನಂತರ  ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಪ್ರಕರಣ ಸಂಬಂಧ ಸೆಪ್ಟೆಂಬರ್ 17ರಂದು  ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ನಾರಾಯಣ ಧನರಾಜ್ ಘುಗೆ ಹಾಗೂ ರಾಹುಲ್ ತುಕಾರಾಂ ಘುಗೆ ಎಂಬಿಬ್ಬರ ಸಹಿತ ಆರು ಮಂದಿಯನ್ನು ಬಂಧಿಸಿದ್ದಾರೆಂಬ ಮಾಹಿತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News