ವ್ಯಕ್ತಿಗೆ ಹಲ್ಲೆಗೈದು ದರೋಡೆ ಮಾಡಿದ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2020-09-19 11:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.19: ಸಹೋದರನ ಕೊಲೆಯ ಪ್ರತೀಕಾರಕ್ಕಾಗಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ಆರೋಪ ಪ್ರಕರಣ ಸಂಬಂಧ ಮೂವರನ್ನು ಚಾಮರಾಜಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಗಿರಿಪುರದ ಅನಿಲ್ ಕುಮಾರ್(28), ತ್ಯಾಗರಾಜನಗರ ವಿನಯ್(24), ಶ್ರೀನಗರದ ಅರವಿಂದ(24) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಆ.21ರಂದು ರಾತ್ರಿ ಚಾಮರಾಜಪೇಟೆಯ ಆನಂದಪುರದ ಸತೀಶ್ ಎಂಬವರನ್ನು ಆರೋಪಿಗಳಾದ ಅನಿಲ್ ಕುಮಾರ್ ಸೇರಿ ಇನ್ನಿತರರು ಮಾರಣಾಂತಿಕ ಹಲ್ಲೆ ನಡೆಸಿ 3 ಸಾವಿರ ನಗದು, ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಾಮರಾಜಪೇಟೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣ ಹಿನ್ನೆಲೆ: ಆರೋಪಿ ಅನಿಲ್ ಕುಮಾರ್ ನ ಸೋದರ ಸಂಜಯ್‍ನನ್ನು ಆನಂದಪುರದ ಸುರೇಶ್ ಮತ್ತಿತರರು 2015ರಲ್ಲಿ ಕೊಲೆ ಮಾಡಿದ್ದು, ಪ್ರತೀಕಾರಕ್ಕಾಗಿ ಆನಂದಪುರದಲ್ಲಿ ಕೊಲೆಗಾರರು ಇರುವುದಾಗಿ ಭಾವಿಸಿ ಆನಂದಪುರದ ಮುಖ್ಯರಸ್ತೆಯ ಮನೆಯೊಂದರಲ್ಲಿ ಮಲಗಿದ್ದ ಸತೀಶ್‍ನನ್ನು ಆರೋಪಿಗಳು ಸುರೇಶ್ ಎಂದುಕೊಂಡು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಹಲ್ಲೆಗೊಳಗಾಗಿದ್ದ ಸತೀಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಿಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಂಧಿತ ಆರೋಪಿಗಳಿಂದ 1 ಸಾವಿರ ನಗದು, 2 ಮೊಬೈಲ್, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅನಿಲ್ ಕುಮಾರ್ ದರೋಡೆ, ಸುಲಿಗೆ, ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದು ಇತ್ತೀಚೆಗಷ್ಟೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಈತನ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News