ಕೋವಿಡ್ ಕಾರ್ಮೋಡದ ನಡುವೆ ಸೋಮವಾರದಿಂದ ವಿಧಾನಮಂಡಲ ಅಧಿವೇಶನ: ಆಡಳಿತ-ವಿಪಕ್ಷಗಳ ವಾಗ್ಯುದ್ಧಕ್ಕೆ ವೇದಿಕೆ ಸಜ್ಜು

Update: 2020-09-19 12:45 GMT

ಬೆಂಗಳೂರು, ಸೆ. 19: ಮಾರಕ ಕೊರೋನ ವೈರಸ್ ಸೋಂಕಿನ ಆತಂಕದ ನಡುವೆ ನಾಳೆಯಿಂದ(ಸೆ.21) ಪ್ರಾರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಿತಿ ಮೀರುತ್ತಿರುವ ಕೋವಿಡ್ ಪ್ರಕರಣಗಳು, ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಆರೋಪ, ಗದ್ದಲ ಸೃಷ್ಟಿಸಿರುವ ಡ್ರಗ್ಸ್ ದಂಧೆ, ವಿವಾದಿತ ಅಧ್ಯಾದೇಶಗಳ ಜಾರಿ, ಡಿ.ಜೆ.ಹಳ್ಳಿ ಗಲಭೆ ಸೇರಿದಂತೆ ಇನ್ನಿತರ ಮಹತ್ವದ ವಿಚಾರಗಳ ಬಗ್ಗೆ ಆಡಳಿತ-ವಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ವೇದಿಕೆ ಸಜ್ಜುಗೊಂಡಿದೆ.

ಸೆ.21ರ ಸೋಮವಾರ ಬೆಳಗ್ಗೆ 11ಗಂಟೆಗೆ 15ನೆ ವಿಧಾನಸಭೆಯ ಏಳನೆ ಅಧಿವೇಶನ ಆರಂಭಗೊಳ್ಳಲಿದ್ದು, ಒಟ್ಟು ಎಂಟು ದಿನ (ಸೆ.30) ಕಾರ್ಯಕಲಾಪಗಳು ನಡೆಯಲಿವೆ. ಮೊದಲ ದಿನ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಹಿತ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಿದ್ದು, ಸೆ.22ರಿಂದ ಅಧಿಕೃತ ಕಲಾಪ ಆರಂಭಗೊಳ್ಳಲಿದೆ. ಆದರೆ, ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಚಿವರು ಮತ್ತು ಶಾಸಕರು ಗೈರು ಹಾಜರಾಗುವ ಸಾಧ್ಯತೆಗಳಿವೆ.

ಇದೇ ಮೊದಲ ಬಾರಿಗೆ ಸ್ಪೀಕರ್, ಮುಖ್ಯಮಂತ್ರಿ, ವಿಪಕ್ಷ ನಾಯಕರು ಸಹಿತ ಸಚಿವರು, ಶಾಸಕರು, ಸಚಿವಾಲಯ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಪ್ರತಿಯೊಬ್ಬರು ಕಲಾಪದಲ್ಲಿ ಪಾಲ್ಗೊಳ್ಳುವ ಮೊದಲು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಿದ್ದು, ಕೊರೋನ ನೆಗೆಟಿವ್ ಇರುವವರಿಗೆ ಮಾತ್ರ ಕಲಾಪಕ್ಕೆ ಪ್ರವೇಶ ನೀಡಲಾಗುತ್ತಿದೆ. ಸೋಂಕು ತಡೆಗಟ್ಟುವ ದೃಷ್ಟಿಯಿಂದ ವ್ಯಕ್ತಿಗತ ಅಂತರ ಕಾಯ್ದುಕೊಂಡು ಅಧಿವೇಶನ ಕಲಾಪ ನಡೆಸಲಾಗುತ್ತದೆ.

ಮಾರ್ಚ್ ನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೆ ಮಾರಕ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮೊಟಕುಗೊಳಿಸಲಾಗಿತ್ತು. ಇದೀಗ ಕೋವಿಡ್ ಆತಂಕದ ಮಧ್ಯೆ ಕಲಾಪ ಆರಂಭಗೊಳ್ಳುತ್ತಿದೆ. ರಾಜ್ಯದಲ್ಲಿ ಸುರಿದ ಭಾರೀ ಹಿನ್ನೆಲೆಯಲ್ಲಿ ಬಂದ ಪ್ರವಾಹ, ಕೇಂದ್ರದಿಂದ ಬರಬೇಕಿರುವ ಜಿಎಸ್ಪಿ ಪರಿಹಾರ ಬಾಕಿ ಸೇರಿದಂತೆ ಪ್ರಚಲಿತ ವಿದ್ಯಮಾನಗಳು ವಿಧಾನ ಮಂಡಲ ಉಭಯ ಸದನಗಳಲ್ಲಿ ಪ್ರತಿಧ್ವನಿಸಲಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಆಡಳಿತಾರೂಢ ಬಿಜೆಪಿ ಸರಕಾರವನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮದೇ ರೀತಿಯಲ್ಲಿ ರಣತಂತ್ರ ರೂಪಿಸಿಕೊಂಡಿವೆ. ಈ ಮಧ್ಯೆ ವಿಪಕ್ಷಗಳಿಗೆ ಪ್ರತ್ಯುತ್ತರ ನೀಡಲು ಬಿಜೆಪಿ ಸರಕಾರದ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿಗಳ ಸೇರಿದಂತೆ ಸಚಿವರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ.

ಕೋವಿಡ್-19 ನಿರ್ವಹಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿರುವುದನ್ನು ಅಧಿವೇಶನದಲ್ಲಿ ಬಿಚ್ಚಿಡಲು ಕಾಂಗ್ರೆಸ್ ಸಜ್ಜಾಗಿದೆ. ಜತೆಗೆ ಸರಕಾರದ ವಿರುದ್ಧ ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಆರೋಪವನ್ನು ಕಾಂಗ್ರೆಸ್ ಮಾಡಿದ್ದು, ಈ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಲು ಆಗ್ರಹಿಸಿತ್ತು. ಆದರೆ, ಈ ಆರೋಪವನ್ನು ಸರಕಾರ ತಳ್ಳಿ ಹಾಕಿದ್ದು, ಉಪಕರಣ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಮರ್ಥಿಸಿಕೊಂಡಿತ್ತು. ಈ ವಿಚಾರವೂ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.

ಜಟಾಪಟಿ: ಕೋವಿಡ್-19 ಪ್ರಕರಣಗಳ ಮತ್ತು ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ, ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಆರೋಪ, ಡಿ.ಜೆ.ಹಳ್ಳಿ ಗಲಭೆ, ಡ್ರಗ್ಸ್ ದಂಧೆ, ನೆರೆ ಪರಿಹಾರದಲ್ಲಿನ ಲೋಪಗಳು ಸೇರಿದಂತೆ ರಾಜ್ಯ ಸರಕಾರದ ಆಡಳಿತ ವೈಫಲ್ಯ ಸೇರಿದಂತೆ ವಿಪಕ್ಷಗಳು ಇನ್ನಿತರ ವಿಚಾರಗಳನ್ನು ಪ್ರಸ್ತಾಪಿಸಲಿವೆ. ಈ ವಿಚಾರಗಳು ಆಡಳಿತ ಮತ್ತು ವಿಪಕ್ಷಗಳ ನಡುವಿನ ಜಟಾಪಟಿಗೂ ಕಾರಣವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಧ್ಯಾದೇಶಗಳ ವಿರುದ್ಧ ಆಕ್ರೋಶ: ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೈಗಾರಿಕಾ ಕಾಯ್ದೆ ತಿದ್ದುಪಡಿ ಸೇರಿದಂತೆ ರೈತ ವಿರೋಧಿ ಮತ್ತು ಜನ ವಿರೋಧಿ ಅಧ್ಯಾದೇಶಗಳ ಜಾರಿಗೆ ಮುಂದಾಗಿರುವ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷ ಕಾಂಗ್ರೆಸ್ ತೀರ್ಮಾನಿಸಿದೆ. ಈ ಮಧ್ಯೆ ರೈತ ವಿರೋಧಿ ನೀತಿಗಳನ್ನು ಖಂಡಿಸಿ ರೈತರು ಬೀದಿಗೆ ಇಳಿಯುತ್ತಿದ್ದು, ಅಧಿವೇಶನದ ಒಳಗೆ ಮತ್ತು ಹೊರಗೆ ಆಕ್ರೋಶ ವ್ಯಕ್ತವಾಗುವ ಸಾಧ್ಯತೆಗಳಿವೆ.

ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ 8 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಷ್ಟ ಸಂಭವಿಸಿದೆ. ನೂರಾರು ಕುಟುಂಬಗಳ ಮನೆ-ಮಠ ಕಳೆದುಕೊಂಡಿದ್ದು ಬೀದಿಗೆ ಬಿದ್ದಿದ್ದಾರೆ. ಆದರೆ, ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಸರಕಾರ ಧಾವಿಸಿಲ್ಲ. ಕೇಂದ್ರ ಸರಕಾರವೂ ಈವರೆಗೂ ಬಿಡಿಗಾಸು ಹಣವನ್ನು ನೀಡಿಲ್ಲ ಎಂಬ ಆರೋಪವು ಕಲಾಪದಲ್ಲಿ ಕೋಲಾಹಲ ಸೃಷ್ಟಿಸಲಿದೆ.

ಈ ಮಧ್ಯೆ ಯುವ ಸಮೂಹವನ್ನು 'ಅಮಲಿಗೆ' ತಳ್ಳುತ್ತಿರುವ ಡ್ರಗ್ಸ್ ದಂಧೆ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದು, ನಟ, ನಟಿಯರ ಜೊತೆಗೆ ಕೆಲ ರಾಜಕೀಯ ಮುಖಂಡ ಹೆಸರುಗಳು ಕೇಳಿಬರುತ್ತವೆ. `ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳಲು ಕಾರಣ ಡ್ರಗ್ಸ್ ದಂಧೆ ಕಾರಣ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದು, ಈ ವಿಚಾರವು ಅಧಿವೇಶನದಲ್ಲಿ ಕಾವೇರಿದ ಚರ್ಚೆಗೆ ನಾಂದಿಯಾಗಲಿದೆ.

ಪ್ರಮುಖ ಸಚಿವರೇ ಗೈರು ಸಾಧ್ಯತೆ: ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಆಹಾರ ಸಚಿವ ಕೆ.ಗೋಪಾಲಯ್ಯ ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಸಹಿತ ಆರೇಳು ಮಂದಿ ಸಚಿವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೆ ಕೆಲವರು ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ಹೀಗಾಗಿ ಅವರೆಲ್ಲರೂ ಅಧಿವೇಶನ ಕಲಾಪದಿಂದ ದೂರ ಉಳಿಯಲಿದ್ದಾರೆಂದು ಹೇಳಲಾಗುತ್ತಿದೆ.

ಅಲ್ಲದೆ, ಆಡಳಿತ ಮತ್ತು ವಿಪಕ್ಷ ಸೇರಿದಂತೆ ಮೂರು ಪಕ್ಷಗಳ ಹತ್ತಕ್ಕೂ ಹೆಚ್ಚು ಮಂದಿ ಶಾಸಕರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಅವರು ಅಧಿವೇಶನಕ್ಕೆ ಗೈರು ಹಾಜರಾಗುವ ಸಾಧ್ಯತೆಗಳಿವೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮೊದಲಿನಂತೆ ಸಚಿವರು, ಶಾಸಕರು ಪಾಲ್ಗೊಳ್ಳುವ ಸಾಧ್ಯತೆಗಳು ಕಡಿಮೆ ಇದೆ. ಕೊರೋನ ಆತಂಕದ ನಡುವೆ ಕಲಾಪವು ರಾಜ್ಯದ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಎಷ್ಟರಮಟ್ಟಿಗೆ ಪರಿಹಾರ ಕಲ್ಪಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯ ಸರಕಾರದ ಜನವಿರೋಧಿ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ಸದನದಲ್ಲಿ ಸುದೀರ್ಘ ಚರ್ಚೆ ನಡೆಸಿ, ಅವುಗಳ ಸಾಧಕ-ಬಾಧಕಗಳನ್ನು ರಾಜ್ಯದ ಜನರ ಮುಂದೆ ಇಡಬೇಕು ಎಂಬುದು ನಮ್ಮ ಆಶಯ. ಆದರೆ, ಈ ಬಾರಿಯ ಅಧಿವೇಶನದಲ್ಲಿ ಪ್ರಮುಖ ವಿಚಾರಗಳ ಚರ್ಚೆಗೆ ಅಗತ್ಯ ಸಮಯ ಸಿಗುವುದೇ ಅನುಮಾನವೆಂಬಂತಿದೆ'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News