ಬಂಧಿತ ಪತ್ರಕರ್ತ ರಾಜೀವ್ ಶರ್ಮಾ ಸೇನೆಯ ಸೂಕ್ಷ್ಮ ಮಾಹಿತಿಗಳನ್ನು ಚೀನಾ ಗುಪ್ತಚರ ಇಲಾಖೆಗೆ ನೀಡುತ್ತಿದ್ದರು

Update: 2020-09-19 16:13 GMT

ಹೊಸದಿಲ್ಲಿ: ಇತ್ತೀಚೆಗೆ ಬಂಧಿಸಲ್ಪಟ್ಟಿದ್ದ ಪತ್ರಕರ್ತ ರಾಜೀವ್ ಶರ್ಮಾ 2016ರಿಂದ ದೇಶದ ಸೂಕ್ಷ್ಮ ಮಾಹಿತಿಗಳನ್ನು ಚೀನಾಗೆ ಕಳುಹಿಸುತ್ತಿದ್ದರು ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.

ರಕ್ಷಣಾ ದಾಖಲೆಗಳು, ವಿದೇಶಿ ನೀತಿಯ ಕುರಿತ ದಾಖಲೆಗಳು, ದಲಾಯ್ ಲಾಮಾ, ಸೇನೆಯ ಚಟುವಟಿಕೆಗಳು ಮತ್ತು ಭಾರತ-ಚೀನಾ ಗಡಿಭಾಗದ ಪರಿಸ್ಥಿತಿಯ ಬಗ್ಗೆ ದಾಖಲೆಗಳನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

“ಶರ್ಮಾ ಸೂಕ್ಷ್ಮ ಮಾಹಿತಿಗಳನ್ನು ಚೀನಾ ಗುಪ್ತಚರ ಇಲಾಖೆಗೆ ಕಳುಹಿಸುತ್ತಿದ್ದರು. ಅದಕ್ಕಾಗಿ ಅವರಿಗೆ ವಿವಿಧ ಹವಾಲಾ ಜಾಲದಿಂದ ಭಾರೀ ಮೊತ್ತಗಳು ಲಭಿಸುತ್ತಿದ್ದವು” ಎಂದು ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.

ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡ ಆರೋಪದಲ್ಲಿ ಚೀನಾದ ಮಹಿಳೆ ಮತ್ತು ಆಕೆಯ ನೇಪಾಳಿ ಸಹೋದ್ಯೋಗಿಯನ್ನೂ ಕೂಡ ಬಂಧಿಸಲಾಗಿದೆ.

‘‘ಅನೇಕ ಮೊಬೈಲ್ ಫೋನ್, ಲ್ಯಾಪ್‌ಟಾಪ್, ದೋಷಾರೋಪಣೆ ಮಾಡಬಹುದಾದ ಹಾಗೂ ಸೂಕ್ಷ್ಮ ಇತರ ಸಾಮಗ್ರಿಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆೆ’’ ಎಂದು ಅವರು ಹೇಳಿದ್ದಾರೆ. ಪ್ರೆಸ್ ಇನ್‌ಫಾರ್ಮೇಶನ್ ಬ್ಯೂರೊ (ಪಿಐಬಿ) ಮಾನ್ಯತೆ ಹೊಂದಿದ ಹಾಗೂ ದಿಲ್ಲಿಯ ಪೀತಾಮ್‌ಪುರದಲ್ಲಿ ವಾಸಿಸುತ್ತಿರುವ ರಾಜೀವ್ ಅವರನ್ನು ದಿಲ್ಲಿ ಪೊಲೀಸರ ವಿಶೇಷ ಘಟಕ ಸೋಮವಾರ ಬಂಧಿಸಿದೆ ಎಂದು ಅವರು ತಿಳಿಸಿದ್ದಾರೆ.

‘‘ಶರ್ಮಾ ಅವರ ವಶದಲ್ಲಿ ಸೇನೆಗೆ ಸಂಬಂಧಿಸಿದ ಕೆಲವು ವರ್ಗೀಕೃತ ದಾಖಲೆಗಳು ಪತ್ತೆಯಾಗಿವೆ. ತನಿಖೆ ಮುಂದುವರಿದಿದೆ. ಸೂಕ್ತ ಸಂದರ್ಭದಲ್ಲಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು’’ ಎಂದು ಹಿರಿಯ ಅಧಿಕಾರಿ ಸಂಜೀವ್ ಕುಮಾರ್ ಯಾದವ್ ಶುಕ್ರವಾರ ಹೇಳಿದ್ದಾರೆ.

ಪ್ರತಿ ಮಾಹಿತಿಗೆ ಶರ್ಮಾ 1000 ಡಾಲರ್ ಪಡೆಯುತ್ತಿದ್ದರು ಹಾಗೂ ಕಳೆದ ಒಂದೂವರೆ ವರ್ಷದಲ್ಲಿ ಅವರು 30 ಲಕ್ಷ ರೂಪಾಯಿ ಪಡೆದಿದ್ದರು. ಅವರು ಚೀನಾದ ‘ಗ್ಲೋಬಲ್ ಟೈಮ್ಸ್‌ಗೆ’ ರಕ್ಷಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಲೇಖನ ಬರೆದಿದ್ದರು ಹಾಗೂ 2016ರಲ್ಲಿ ಚೀನಾ ಏಜೆಂಟರನ್ನು ಸಂಪರ್ಕಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News