ಸ್ಮಶಾನ ಭೂಮಿ ಮಠಕ್ಕೆ ಹಸ್ತಾಂತರ: ಗ್ರಾಮಸ್ಥರಿಂದ ತಹಶೀಲ್ದಾರ್ ಕಚೇರಿ ಎದುರು ತಮಟೆ ಬಾರಿಸಿ ಪ್ರತಿಭಟನೆ

Update: 2020-09-19 14:39 GMT

ಬೆಂಗಳೂರು, ಸೆ.19: ನೆಲಮಂಗಲ ತಾಲೂಕಿನ ಯಲಚಗೆರೆ ಗ್ರಾಮದಲ್ಲಿನ ಗೋಮಾಳವನ್ನ ಗ್ರಾಮಸ್ಥರು ಸ್ಮಶಾನಕ್ಕೆ ಬಳಸುತ್ತಿದ್ದು, ಈಗ ದಿಢೀರನೇ ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಮೀನನ್ನು ಹಸ್ತಾಂತರಿಸಲಾಗಿದೆ. ಹೀಗಾಗಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ತಹಶೀಲ್ದಾರ್ ಕಚೇರಿ ಎದುರು ತಮಟೆ ಬಾರಿಸಿ ಪ್ರತಿಭಟನೆ ನಡೆಸಿದ್ದರು.

ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಯಲಚಗೆರೆ ಗ್ರಾಮದ ಸರ್ವೆ ನಂಬರ್ 74ರಲ್ಲಿನ 9 ಎಕರೆ 20ಗುಂಟೆ ಜಮೀನಿನಲ್ಲಿ ಈ ಹಿಂದಿನಿಂದಲೂ ಗೋವುಗಳು ಆಹಾರ ಹಾಗೂ ಆಶ್ರಯ ಪಡೆದಿವೆ. ಅಲ್ಲದೇ ಊರಿನಲ್ಲಿ ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರವನ್ನ ನೆರವೇರಿಸಲು ಗೋಮಾಳದ ಭೂಮಿಯನ್ನ ಬಳಸಲಾಗುತ್ತಿದೆ. ಸರಕಾರ ಏಕಾಏಕಿ ತಾಲೂಕು ಆಡಳಿತ, ಪ್ರಭಾವಿಗಳಿಗೆ ಮಣಿದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಮೀನು ಹಸ್ತಾಂತರಿಸಿದೆ ಎನ್ನಲಾಗಿದ್ದು, ಗ್ರಾಮಸ್ಥರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಯಲಚಗೆರೆ ಗ್ರಾಮದ ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಜಮೀನು ಹಸ್ತಾಂತರ ವಿರೋಧಿಸಿ ತಮಟೆ ಪ್ರತಿಭಟನೆ ನಡೆಸಿದರು.

ಮಠಕ್ಕೆ ಹಸ್ತಾಂತರಿಸಿರುವ ಗೋಮಾಳದ ಜಾಗವನ್ನ ವಾಪಸ್ ಪಡೆದು, ಅದೇ ಜಾಗದಲ್ಲಿ ಸ್ಮಶಾನಕ್ಕೆ ಅವಕಾಶ ಸೇರಿದಂತೆ ಗ್ರಾಮದಲ್ಲಿ ಆಶ್ರಯ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ತಹಶೀಲ್ದಾರ್ ಶ್ರೀನಿವಾಸ್ ವಿರುದ್ಧ ಧಿಕ್ಕಾರ ಕೂಗಿದ್ದು, ಜನ ವಿರೋಧಿ-ರೈತ ವಿರೋಧಿ ತಹಶೀಲ್ದಾರ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ 400ಕ್ಕೂ ಹೆಚ್ಚು ರಾಸುಗಳಿವೆ, ಅವುಗಳ ಹಸಿವು ನಿಗಿಸುತ್ತಿರುವುದು ಗೋಮಾಳದ ಹುಲ್ಲುಗಾವಲು. ಮಠಕ್ಕೆ ಗೋಮಾಳದ ಜಮೀನು ಹಸ್ತಾಂತರ ಮಾಡುವುದರಿಂದ ಗೋವುಗಳಿಗೆ ಮೇವಿನ ಕೊರತೆಯಾಗಲಿದೆ. ಊರಿನ ಜಮೀನನ್ನು ಊರಿನ ಬಳಕೆಗೆ ನೀಡಬೇಕೆನ್ನುವುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News