ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಸ್ವದೇಶಿ ಉತ್ಪನ್ನಗಳ ಮಾರಾಟ ಕುರಿತು ನಿರ್ಧಾರವಾಗಿಲ್ಲ: ಕೇಂದ್ರ

Update: 2020-09-19 16:17 GMT

ಹೊಸದಿಲ್ಲಿ,ಸೆ.19: ದೇಶಾದ್ಯಂತ ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಕೇವಲ ಸ್ವದೇಶಿ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ರಕ್ಷಣಾ ಸಚಿವಾಲಯವು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಸಹಾಯಕ ರಕ್ಷಣಾ ಸಚಿವ ಶ್ರೀಪಾದ ನಾಯ್ಕ್ ಅವರು ಶನಿವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಕಳೆದ ಮೇ ತಿಂಗಳಿನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬಿ ಭಾರತದ ಕುರಿತು ಮಾತನಾಡಿ, ದೇಶದ ಆರ್ಥಿಕತೆಯನ್ನು ಬಲಗೊಳಿಸಲು ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವಂತೆ ಕರೆ ನೀಡಿದ್ದರು.

ಪ್ರಧಾನಿಯವರ ಕರೆಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯವು ತನ್ನ ಮಳಿಗೆಗಳಲ್ಲಿ ಕೇವಲ ಭಾರತೀಯ ಉತ್ಪನ್ನಗಳ ಮಾರಾಟ ಮಾಡುವ ಬಗ್ಗೆ ಪರಿಶೀಲಿಸಲಿದೆಯೇ ಎಂಬ ಸದಸ್ಯರ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು.

ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಒಟ್ಟು ವಹಿವಾಟು 2017-18ರಲ್ಲಿ 17,910 ಕೋ.ರೂ. ಮತ್ತು 2018-19ರಲ್ಲಿ 18,917 ಕೋ.ರೂ.ಗಳಾಗಿದ್ದು, 2019-20ನೇ ಸಾಲಿನಲ್ಲಿ 17,588 ಕೋ.ರೂ.ಗಳ ವಹಿವಾಟು ನಡೆದಿದೆ. ಹಾಲಿ ಹಣಕಾಸು ವರ್ಷದಲ್ಲಿ ಆಗಸ್ಟ್‌ವರೆಗೆ 3,692 ಕೋ.ರೂ.ಗಳ ವಹಿವಾಟು ದಾಖಲಾಗಿದೆ ಎಂದು ಅವರು ತಿಳಿಸಿದರು.

ವಾಯುನೆಲೆ: 37 ವಾಯುನೆಲೆಗಳ ಆಧುನೀಕರಣ ಗುತ್ತಿಗೆಯನ್ನು ಸರಕಾರವು ಖಾಸಗಿ ಕಂಪನಿಯೊಂದಕ್ಕೆ ನೀಡಿದೆಯೇ ಎಂಬ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿದ ನಾಯ್ಕೆ,ವಾಯುನೆಲೆ ಮೂಲಸೌಕರ್ಯಗಳ ಆಧುನೀಕರಣದಿಂದ ಅವುಗಳ ಸಾಮರ್ಥ್ಯ ಹೆಚ್ಚುತ್ತದೆ. ರಾತ್ರಿ ಕಾರ್ಯಾಚರಣೆಗಳು ಸೇರಿದಂತೆ ಪ್ರತಿಕೂಲ ಹವಾಮಾನದಲ್ಲಿಯೂ ಅವು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News