ಬುಲೆಟ್ ಗಾಯ ಚಿಕ್ಕದು ಎಂದ ಸರಕಾರ; ಸಂತ್ರಸ್ತನಿಗೆ ಕೇವಲ 20 ಸಾವಿರ ರೂ. ಪರಿಹಾರ

Update: 2020-09-19 17:14 GMT

ಹೊಸದಿಲ್ಲಿ, ಸೆ. 19: ಈಶಾನ್ಯ ದಿಲ್ಲಿಯ ಕೋಮು ಗಲಭೆಯಲ್ಲಿ ಗಂಭೀರ ಗಾಯಗೊಂಡ ಪ್ರತಿಯೊಬ್ಬರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದುದರಿಂದ ತನಗೆ ನೀಡಲಾದ 20 ಸಾವಿರ ರೂಪಾಯಿ ಪರಿಹಾರವನ್ನು 2 ಲಕ್ಷ ರೂಪಾಯಿಗೆ ಏರಿಕೆ ಮಾಡುವಂತೆ 42 ಹರೆಯದ ಶೌಕತ್ ಅಲಿ ದಿಲ್ಲಿ ಸರಕಾರದಲ್ಲಿ ಮನವಿ ಮಾಡಿದ್ದಾರೆ.

ರೈಫಲ್ ಬುಲೆಟ್ ಗಾಯ ತುಂಬಾ ಚಿಕ್ಕದು ಎಂದು ಯಮುನಾ ವಿಹಾರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಕೇವಲ 20 ಸಾವಿರ ರೂಪಾಯಿ ಮಾತ್ರ ಪರಿಹಾರವಾಗಿ ಸ್ವೀಕರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಶೌಕತ್ ಅಲಿ ಅವರಿಗೆ ಪತ್ನಿ, ಮೂವರು ಮಕ್ಕಳು ಹಾಗೂ ತಂದೆ-ತಾಯಿ ಇದ್ದಾರೆ. ಅವರ ಕುಟುಂಬದಲ್ಲಿ ದುಡಿಯುತ್ತಿರುವುದು ಶೌಕತ್ ಅಲಿ ಮಾತ್ರ. ಮುಸ್ತಫಾಬಾದ್ ಪ್ರದೇಶದ ಬಾಬು ನಗರದ ನಿವಾಸಿಯಾಗಿರುವ ಶೌಕತ್ ಅಲಿ ಫೆಬ್ರವರಿ 25ರಂದು ಸಂಜೆ ಮನೆಗೆ ಬೇಕಾದ ಕೆಲವು ಸಾಮಗ್ರಿಗಳನ್ನು ಖರೀದಿಸಲು ಹೊರಗೆ ಬಂದಿದ್ದರು. ಅವರು ಮಾರುಕಟ್ಟೆಯತ್ತ ತೆರಳುತ್ತಿರುವಾಗ ಸ್ವಲ್ಪ ದೂರದಲ್ಲಿ ಗದ್ದಲ ಕೇಳಿ ಬಂದಿತ್ತು. ಈ ಸಂದರ್ಭ ಅವರ ತೊಡೆಗೆ ರೈಫಲ್ ಬುಲೆಟ್ ನುಗ್ಗಿ ಘಾಸಿಗೊಳಿಸಿತ್ತು. ಅವರು ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News