ಸರಕಾರ ಘೋಷಿಸಿದ್ದ ಕೋವಿಡ್ ಪ್ಯಾಕೇಜ್ ಎಷ್ಟು ಜನರಿಗೆ ತಲುಪಿದೆ: ಡಿ.ಕೆ.ಶಿವಕುಮಾರ್ ಪ್ರಶ್ನೆ

Update: 2020-09-19 16:30 GMT

ಬೆಂಗಳೂರು, ಸೆ, 19: `ಕೊರೋನ ಅವಧಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಘೋಷಣೆ ಮಾಡಿರುವ ಪರಿಹಾರ ಪ್ಯಾಕೇಜ್‍ನಿಂದ ರಾಜ್ಯದ ಎಷ್ಟು ಜನರಿಗೆ ಪ್ರಯೋಜನವಾಗಿದೆ ಎಂಬುದರ ಬಗ್ಗೆ ಅಂಕಿಅಂಶಗಳ ದಾಖಲೆ ನೀಡಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಶನಿವಾರ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಹಾಗೂ ಅವರ ಸ್ನೇಹಿತರನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಅವರು, `ಸರಕಾರ ವಿಧಾನ ಮಂಡಲ ಅಧಿವೇಶನ ಕರೆದಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ದಿಲ್ಲಿ ಪ್ರವಾಸ ಮುಗಿಸಿದ್ದಾರೆ. ರಾಜ್ಯದ ಜನರು ಬಿಜೆಪಿ ಹಾಗೂ ಕೇಂದ್ರ ಸರಕಾರಕ್ಕೆ 25 ಸಂಸದರನ್ನು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸರ್ವಪಕ್ಷ ನಿಯೋಗವನ್ನು ಪ್ರಧಾನಿ, ಕೇಂದ್ರ ವಿತ್ತ ಸಚಿವರ ಮುಂದೆ ಕರೆದುಕೊಂಡು ಹೋಗದಿದ್ದರೂ ಕೇವಲ ಬಿಜೆಪಿ ಸಂಸದರನ್ನು ಕರೆದುಕೊಂಡು ಹೋಗಿ ರಾಜ್ಯದ ಸಮಸ್ಯೆ ಬಗ್ಗೆ ಚರ್ಚಿಸಿ ಆಗುತ್ತಿರುವ ಅನ್ಯಾಯ ತಡೆದು, ಜನರ ಬೇಡಿಕೆ ಹಾಗೂ ಅನುದಾನ ತರುವ ಪ್ರಯತ್ನ ಮಾಡುವ ನಿರೀಕ್ಷೆ ಇತ್ತು. ಆದರೆ ಅದನ್ನು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಅಧಿವೇಶನ ನಡೆಯುವಾಗ ಎಲ್ಲ ಪಕ್ಷದ ಸದಸ್ಯರನ್ನು ಕರೆದು, ಪಕ್ಷಭೇದ ಮರೆತು ರಾಜ್ಯದ ಹಿತದ ಬಗ್ಗೆ ಚರ್ಚೆ ಮಾಡುವ ಸಂಪ್ರದಾಯ ನಡೆದುಕೊಂಡು ಬರುತ್ತಿತ್ತು. ಈ ಬಾರಿ ಸಂಸತ್ ಅಧಿವೇಶನ ನಡೆಯುವಾಗ ಮುಖ್ಯಮಂತ್ರಿಗಳು ದಿಲ್ಲಿಗೆ ಹೋಗಿದ್ದರೂ ಯಾವ ಸಂಸದರನ್ನೂ ಕರೆದು ಸಭೆ ಮಾಡಿಲ್ಲ. ನಮ್ಮ ಸಂಸದರನ್ನು ಕರೆದುಕೊಂಡು ಹೋಗಲು ಇಷ್ಟವಿಲ್ಲದಿದ್ದರೆ ಬೇಡ. ಅವರ ಸಂಸದರನ್ನೇ ಕರೆದುಕೊಂಡು ಹೋಗಿ ಸರಕಾರದ ಮೇಲೆ ಒತ್ತಡ ಹೇರಬಹುದಾಗಿತ್ತು. ಈ ವಿಚಾರದಲ್ಲಿ ಸಿಎಂ ವಿಫಲರಾಗಿದ್ದಾರೆ. ಈ ಬಾರಿ ವಿಧಾನ ಮಂಡಲ ಅಧಿವೇಶನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಈ ಸಂದರ್ಭದಲ್ಲಿ ನಾವು ರಾಜ್ಯದ ಪರವಾಗಿ ಒಂದು ವಿಚಾರವನ್ನು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರು ಘೋಷಣೆ ಮಾಡಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‍ನಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂದಿದೆ. ಈ ಪ್ಯಾಕೇಜ್‍ನಿಂದ ರಾಜ್ಯದಲ್ಲಿ ಯಾವಾಗ? ಯಾರಿಗೆ? ಎಷ್ಟು ಪ್ರಮಾಣದ ಹಣ ನೀಡಲಾಗಿದೆ? ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗಳು ಬ್ಯಾಂಕ್‍ಗಳ ಜತೆ ಎಷ್ಟು ಸಭೆ ನಡೆಸಿದ್ದಾರೆ? ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಪಿಎಂ ಕೇರ್ ನಿಧಿಯ ದೇಣಿಗೆಯನ್ನು ರಾಜ್ಯದ ಜನರಿಗೆ ಯಾವ ರೀತಿ ಬಳಸಲಾಗಿದೆ? ಎಂಬ ಮಾಹಿತಿಯನ್ನು ನೀಡಬೇಕು ಎಂದು ಆಗ್ರಹಿಸಿದರು.

1,610 ಕೋಟಿ ರೂ.ಪ್ಯಾಕೇಜ್ ಹಾಗೂ ನಂತರದ ದಿನಗಳಲ್ಲಿ ಘೋಷಿಸಿದ ಪ್ಯಾಕೇಜ್‍ಗಳಿಂದ ಎಷ್ಟು ಚಾಲಕರಿಗೆ, ಸವಿತಾ ಸಮಾಜದವರಿಗೆ, ದರ್ಜಿಗಳಿಗೆ, ಮಾಡಿವಾಳರಿಗೆ ಪರಿಹಾರ ಸಿಕ್ಕಿದೆ? ಯಾವ ಯಾವ ವರ್ಗಗಳಿಗೆ ನೀಡಲಾಗಿದೆ ಎಂಬುದರ ಕುರಿತು ಸರಕಾರ ತನ್ನ ದಾಖಲೆಯನ್ನು, ಅಂಕಿ-ಅಂಶಗಳ ಮಾಹಿತಿಯನ್ನು ಅಧಿವೇಶನದ ಆರಂಭದ ದಿನದಲ್ಲೇ ಕೊಡಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

ಮಾಧ್ಯಮಗಳ ವರದಿ ಪ್ರಕಾರ ಸರಕಾರ ಪಿಂಚಣಿ ಹಣವನ್ನೇ ನೀಡಿಲ್ಲ. ಕೊರೋನ ಸಮಯದಲ್ಲಿ ಸರಕಾರ ಎಷ್ಟು ಆದೇಶ, ಘೋಷಣೆಗಳನ್ನು ಮಾಡಿತ್ತು, ಅದರಲ್ಲಿ ಎಷ್ಟು ಕಾರ್ಯರೂಪಕ್ಕೆ ಬಂದಿವೆ ಎಂಬ ಮಾಹಿತಿಯನ್ನು ಘೋಷಣೆ ಮಾಡಬೇಕು. ಆರು ತಿಂಗಳಲ್ಲಿ ಅನೇಕ ವಿಚಾರವಾಗಿ ಮಾಧ್ಯಮಗಳು ಸರಕಾರದ ಗಮನಕ್ಕೆ ತಂದಿವೆ. ನಮಗಿಂತ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿವೆ. ನಿಮ್ಮ ಜತೆ ಕೈಜೋಡಿಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೊಸದಿಲ್ಲಿ ಪ್ರವಾಸದಲ್ಲಿ ರಾಜ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಎಷ್ಟು ಬೇಡಿಕೆ ಮುಂದಿಟ್ಟಿದ್ದರು. ಅದರಲ್ಲಿ ಎಷ್ಟು ಹಣ ತಂದಿದ್ದಾರೆ? ಅವರ ಭೇಟಿಯಿಂದ ಎಷ್ಟು ಅನುಕೂಲ ಆಗಿದೆ? ಎಂಬುದರ ಮಾಹಿತಿಯನ್ನು ರಾಜ್ಯದ ಜನರ ಮುಂದೆ ಇಡಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತೇನೆ'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News