ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ: ಆಸ್ತಿ ತೆರಿಗೆ ಹೆಚ್ಚಳಕ್ಕೆ ಬಿಬಿಎಂಪಿ ಚಿಂತನೆ

Update: 2020-09-19 16:32 GMT

ಬೆಂಗಳೂರು, ಸೆ.19: ಬಿಬಿಎಂಪಿ ಜನಪ್ರತಿನಿಧಿಗಳ ಆಡಳಿತಾವಧಿ ಮುಕ್ತಾಯಗೊಂಡಿದ್ದು, ಅದರ ನಡುವೆ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತರುವ ಉದ್ದೇಶದಿಂದ ನಗರದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಬಿಬಿಎಂಪಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

ಜನಪ್ರತಿನಿಧಿಗಳ ಅವಧಿ ಮುಗಿಯುತ್ತಿದ್ದಂತೆ, ಬಿಬಿಎಂಪಿ ಆಥಿರ್ಕ ಪರಿಸ್ಥಿತಿ ಸದೃಢಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ಪ್ರತಿ 3 ವರ್ಷಕ್ಕೊಮ್ಮೆ ಸ್ಥಳೀಯ ನಗರಾಡಳಿತವು ತನ್ನ ವ್ಯಾಪ್ತಿಯ ಆಸ್ತಿಗಳ ತೆರಿಗೆ ಹೆಚ್ಚಳ ಮಾಡಬೇಕಿದೆ. ಅದರಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2016 ಮತ್ತು 17ನೇ ಸಾಲಿನಲ್ಲಿ ಶೇ. 20ರಿಂದ 25 ತೆರಿಗೆ ಹೆಚ್ಚಳ ಮಾಡಲಾಗಿತ್ತು. ಆದರೆ, ನಿಯಮದಂತೆ 2019-20ನೇ ಸಾಲಿನಲ್ಲಿ ತೆರಿಗೆ ಹೆಚ್ಚಳ ಮಾಡಬೇಕಿತ್ತು. ಪ್ರಸಕ್ತ ವರ್ಷದಲ್ಲಿ ಬಿಬಿಎಂಪಿ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ಆ ಕ್ರಮಕ್ಕೆ ಕೈ ಹಾಕಿರಲಿಲ್ಲ. ಇದೀಗ ಜನಪ್ರತಿನಿಧಿಗಳಿಲ್ಲದ ಕಾರಣ ಅಧಿಕಾರಿಗಳು ತೆರಿಗೆ ಹೆಚ್ಚಳದ ಕಡೆಗೆ ಗಮನಹರಿಸಿದ್ದಾರೆ.

ಶೇ. 20ರಿಂದ 25 ಹೆಚ್ಚಳ?: ಕಳೆದ ವರ್ಷವೇ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಅದಕ್ಕೆ ಸರಕಾರ ಅನುಮೋದಿಸಿರಲಿಲ್ಲ. ಇದೀಗ ಪಾಲಿಕೆಯ ಆಡಳಿತಾಧಿಕಾರಿ ಮತ್ತು ಆಯುಕ್ತರು ತೆರಿಗೆ ಹೆಚ್ಚಳ ಮಾಡುವ ಸಂಬಂಧ ಚರ್ಚೆ ನಡೆಸಿದ್ದು, ಶೇ.20 ರಿಂದ 25 ರಷ್ಟು ಹೆಚ್ಚಳ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಇನ್ನಿತರ ಆದಾಯಕ್ಕೂ ಒತ್ತು: ಯಾವುದೇ ಪ್ರಮಾಣದ ಆಸ್ತಿ ತೆರಿಗೆ ಹೆಚ್ಚಳಕ್ಕೆ ಅನುಮತಿಸದಿದ್ದರೆ, ಹೊಸ ಕಟ್ಟಡಗಳಿಗೆ ಸ್ವಾಧಿನಾನುಭವ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಹೆಚ್ಚುವರಿ ತೆರಿಗೆ ವಸೂಲಿಗೆ ಅನುಮತಿಸುವಂತೆ ಸರಕಾರಕ್ಕೆ ಕೋರಲಾಗುತ್ತದೆ. ಅಲ್ಲದೆ, ಖಾತಾ ವರ್ಗಾವಣೆ ಶುಲ್ಕದಲ್ಲಿ ಶೇ. 2ರಿಂದ 5 ಹೆಚ್ಚಳ, ತ್ಯಾಜ್ಯ ಉಪಕರ ಹೆಚ್ಚಳ, ಭೂ ಸಾರಿಗೆ ಉಪಕರ ವಸೂಲಿಗೆ ಅವಕಾಶ ನೀಡುವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲು ಚಿಂತನೆ ನಡೆಸಲಾಗಿದೆ.

ಆದಾಯವಿಲ್ಲದಿದ್ದರೆ ದಿವಾಳಿ?: ಬಿಬಿಎಂಪಿ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳ ಪೈಕಿ ಪೂರ್ಣಗೊಂಡಿರುವ ಕಾಮಗಾರಿಗಳು, ಚಾಲ್ತಿಯಲ್ಲಿರುವ ಕಾಮಗಾರಿಗಳು ಹಾಗೂ ಕಾರ್ಯಾದೇಶ ನೀಡಿ ಆರಂಭವಾಗಬೇಕಿರುವ ಕಾಮಗಾರಿಗಳಿಗಾಗಿಯೇ 11,609.86 ಕೋಟಿ ರೂ. ಬೇಕಿದೆ. ಇದು ಬಿಬಿಎಂಪಿ ಬಜೆಟ್ ಗಾತ್ರಕ್ಕಿಂತ ಹೆಚ್ಚಾದುದಾಗಿದೆ. ಹೀಗಾಗಿ ಬಿಬಿಎಂಪಿಗೆ ಆದಾಯ ವೃದ್ಧಿ ಮಾಡಬೇಕಿದ್ದು, ಅದಕ್ಕೆ ಆಸ್ತಿ ತೆರಿಗೆ ಹೆಚ್ಚಳ ಪ್ರಮುಖ ಮಾರ್ಗವಾಗಿದೆ.

ಕೆಎಂಸಿ ಕಾಯ್ದೆಯಂತೆ ಪ್ರತಿ 3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಳಕ್ಕೆ ಅವಕಾಶವಿದೆ. ತೆರಿಗೆ ಹೆಚ್ಚಳಕ್ಕೆ ಕೌನ್ಸಿಲ್‍ನಲ್ಲಿ 2 ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ, ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಆಡಳಿತಾಧಿಕಾರಿಗಳಿಂದ ಒಪ್ಪಿಗೆ ಪಡೆದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News